ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಸಭೆ ಸದಸ್ಯರ 'ಜನಪರ' ಚರ್ಚೆ

Rashmi Kasaragodu
Updated On : 10 Oct 2013, 12:27 pm

ಕ.ಪ್ರ. ವಾರ್ತೆ೤ ಹೊಳೆನರಸೀಪುರ೤ ಅ. 9
ಪಟ್ಟಣದ ಅಭಿವೃದ್ಧಿ ಪುರಸಭೆಯ ಆದಾಯ-ಉಳಿತಾಯ ಮತ್ತು ಜನಪರತೆಯ ವಿಷಯವಷ್ಟೇ ಅಲ್ಲದೇ, ಪುರಸಭೆ ಅಧಿಕಾರಿಗಳಿಗೆ ಕಾರ್ಯನಿರ್ವಹಣೆ ಕುರಿತಂತೆ ಸಲಹೆ ಸೂಚನೆ ನೀಡಿ ಕಾಳಜಿ ವ್ಯಕ್ತಪಡಿಸಿದ ಚಿತ್ರಣ ಬುಧವಾರ ಇಲ್ಲಿನ ಪುರಸಭೆಯಲ್ಲಿ ಎಚ್.ಆರ್.ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಕಂಡುಬಂತು.
ಸಭೆಯ ಆರಂಭದಿಂದಲೇ ವಿಷಯಗಳ ಚರ್ಚೆಯ ಕುರಿತಂತೆ ಮುಖ್ಯಾಧಿಕಾರಿಗಳೇ ಎಲ್ಲದಕ್ಕೂ ಉತ್ತರಿಸುವ ಬದಲಿಗೆ ಅಧ್ಯಕ್ಷರೇ ಮಾತನಾಡಲಿ ಹಾಗೂ ಸಮರ್ಪಕವಾಗಿ ಉತ್ತರ ನೀಡಲಿ. ಚರ್ಚಿಸುವ ಪ್ರತಿ ವಿಷಯವನ್ನೂ ರೆಕಾರ್ಡ್ ಮಾಡಿ ಎಂದು ಒತ್ತಾಯಿಸಿ ಕಾಂಗ್ರೆಸ್ನ ಸದಸ್ಯ ರಾಘವೇಂದ್ರ ತಕರಾರು ಎತ್ತುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್ನ ಹಿರಿಯ ಸದಸ್ಯ ರವಿಕುಮಾರ್ ಸಮಜಾಯಿಷಿ ನೀಡುವಂತೆ ವರ್ತಿಸಿದ ರು.
ಲಾ ಪಾಯಿಂಟ್ ಮೂಲಕ ಗಮನ ಸೆಳೆದ ಸದಸ್ಯ: ಕೆ.ಆರ್.ಸುಬ್ರಹ್ಮಣ್ಯ ಏರು ಧನಿಯಲ್ಲಿ ವಿರೋಧ ಪಕ್ಷದವರ ಮೇಲೆ ಸವಾರಿ ಮಾಡಲು ಮುಂದಾದರೆ, ಕಿರಿಯ ಸದಸ್ಯ ಹಾಗೂ ವಕೀಲ ಎ.ಶ್ರೀಧರ್ ಪ್ರತಿ ಹಂತದಲ್ಲಿಯೂ ನ್ಯಾಯಾಲಯದಲ್ಲಿ ವಾದ ಮಾಡುವಂತೆ ಎಲ್ಲ ಕಡೆಗಳಲ್ಲಿಯೂ ಲಾ ಪಾಯಿಂಟ್ ಹಾಕುವ ಮೂಲಕ ಗಮನ ಸೆಳೆದರು.
ಸಭೆಯ ಮೊದಲರ್ಧದಲ್ಲಿ ಕಾಂಗ್ರೆಸ್ನ ರಾಘವೇಂದ್ರ, ಜಯಕಾಂತಮ್ಮ, ಸುಮಿತ್ರಾದೇವಿ, ಪಕ್ಷೇತರ ಸದಸ್ಯ ರಂಗನಾಥ ಅವರ ತಕರಾರುಗಳಿಗೆ ಸಮಜಾಯಿಷಿ ನೀಡುತ್ತಲೇ ಸಭೆಯಲ್ಲಿ ಕೆಲ ವಿಷಯಗಳನ್ನು ಚರ್ಚಿಸಿ, ಅನುಮೋದನೆ ನೀಡಬೇಕಾದ ವಿಷಯಗಳಿಗೆ ಅನುಮೋದಿಸಿ ಮುನ್ನಡೆದರೆ, ನಂತರದಲ್ಲಿ ಚರ್ಚೆಗೆ ಬಂದ ಕೆಲ ವಿಷಯಗಳ ಕುರಿತಂತೆ ಆಡಳಿತಾರೂಢ ಜೆಡಿಎಸ್ ಸದಸ್ಯರುಗಳೇ ವಿಷಯಗಳ ಪೂರ್ವ ಪರತೆಯ ಕುರಿತಂತೆ ಚರ್ಚಿಸಿದ್ದಲ್ಲದೇ, ಸಾಧಕ-ಬಾಧಕಗಳ ಕುರಿತಂತೆಯೂ ತಮ್ಮ ತಮ್ಮಲ್ಲೇ ಚರ್ಚಿಸಿಕೊಂಡರು. ಒಂದು ಹಂತದಲ್ಲಿ ಪುರಸಭೆ ಮುಖ್ಯಾಧಿಕಾರಿ, ಎಂಜಿನೀಯರು ಹಾಗೂ ಸಿಬ್ಬಂದಿಗಳಿಗೆ ಕಾರ್ಯನಿರ್ವಹಣೆ ಕುರಿತಂತೆಯೂ ಕೆಲ ಸಲಹೆ ಸೂಚನೆಗಳನ್ನೂ ನೀಡಿ ಕಾಳಜಿ ತೋರಿದ್ದು ಇಂದಿನ ಸಭೆಯ ವಿಶೇಷವಾಗಿತ್ತು.
ರಿಪೇರಿಗಾಗಿ ನಿಂತಿದ್ದೇ ಹೆಚ್ಚು:  ಪುರಸಭೆ ವ್ಯಾಪ್ತಿಯಲ್ಲಿನ ರಸ್ತೆ, ಚರಂಡಿ ಮತ್ತು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ನೈರ್ಮಲ್ಯೀಕರಣ ವಿಭಾಗಕ್ಕೆ ಜೆಸಿಬಿ ಯಂತ್ರ ಖರೀದಿಸುವ ವಿಷಯ ಕುರಿತ ಚರ್ಚೆ ಸಂದರ್ಭದಲ್ಲಿ ಸದಸ್ಯ ಸುಬ್ರಹ್ಮಣ್ಯ, ಶ್ರೀಧರ್, ಪುಟ್ಟರಾಜು ಮೊದಲಾದವರು ಈ ಹಿಂದೆ ಇದೇ ವಿಭಾಗಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ನೀಡಲಾದ ಕಸ ತಳ್ಳುವ ಡೋಜರ್ ಯಂತ್ರಕ್ಕೆ ಲಕ್ಷಾಂತರ ರು. ನೀಡಿದ್ದರೂ, ಒಂದು ತಿಂಗಳೂ ಕೆಲಸ ಮಾಡದ ಕಳಪೆ ಡೋಜರ್ ಕೆಲಸ ಮಾಡಿದ್ದಕ್ಕಿಂತಲೂ ರಿಪೇರಿಗಾಗಿ ನಿಂತಿದ್ದೇ ಹೆಚ್ಚು, ಅದನ್ನು ಮೊದಲು ಸರಿಪಡಿಸಿ ಎಂದು ನೂತನ ಜೆಸಿಬಿ ಯಂತ್ರದ ಖರೀದಿಗೆ ಆಕ್ಷೇಪ ವ್ಯಕ್ತಪಡಿಸಿದರು.
ನವೀಕೃತ ನೀರು ಸರಬರಾಜು ಶುದ್ಧೀಕರಣ ಘಟಕದ ಸ್ಥಾಪನೆಗಾಗಿ ಪುರಸಭೆ ಗುರುತಿಸಿರುವ ಜಮೀನಿನ ಸ್ವಾಧೀನಕ್ಕೆ ಭೂ ಮಾಲೀಕರು ತಕರಾರು ಎತ್ತಿರುವ ವಿಷಯದ ಕುರಿತಂತೆ, ಸದಸ್ಯ ಪುಟ್ಟರಾಜು(ಪುಟ್ಟಿ) ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಗುಂಟೆ ಜಮೀನಿಗೆ 1ಲಕ್ಷ ರು.ಗಳಿಗೂ ಅಧಿಕ ಬೆಲೆಯಿದೆ. ಇಂತಹ ಸಂದರ್ಭದಲ್ಲಿ ಭೂ ಮಾಲೀಕರಿಗೆ ಸರಿಯಾದ ಮಾರುಕಟ್ಟೆಯ ಬೆಲೆಯನ್ನು ನೀಡಿ ಪುರಸಭೆ ವ್ಯಾಪ್ತಿಯಲ್ಲಿ ಎಲ್ಲ ಜನರ ಸದುಪಯೋಗಕ್ಕಾಗಿ ಭೂ ಸ್ವಾಧೀನಪಡಿಸಿಕೊಳ್ಳುತ್ತಿರುವ ಕುರಿತಂತೆ ಭೂ ಮಾಲೀಕರಿಗೆ ಮನವರಿಕೆ ಮಾಡುವಂತೆ ಸೂಚಿಸಿದರು.
ಬಡಾವಣೆಗೆ ಅನಧಿಕೃತ ಹೆಸರು: ಪುರಸಭೆಯವರೇ ಕೆಲ ಸಂದರ್ಭಗಳಲ್ಲಿ ಕೆಲವು ಬಡಾವಣೆಗಳನ್ನು ಅನಧಿಕೃತ ಹೆಸರುಗಳ ಮೂಲಕವೇ ಗುರುತಿಸುವ ಚಾಳಿಯನ್ನು ಕೈಬಿಡುವಂತೆ ಹಿರಿಯ ಸದಸ್ಯ ರವಿಕುಮಾರ್ ಮುಖ್ಯಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಕೆಎನ್ಎ ಬಡಾವಣೆ ಎಂದು ನಾಮಕರಣವಾಗದಿದ್ದರೂ ಸದರಿ ಬಡಾವಣೆಯನ್ನು ಅನಧಿಕೃತ ಹೆಸರಿನಿಂದ ಗುರುತಿಸದಂತೆ ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆಯಲ್ಲಿ ಖಾತೆ ಮಾಡುವ ಸಂದರ್ಭದಲ್ಲೂ ಅನಧಿಕೃತ ಹೆಸರು ಬಳಸದಂತೆ ಎಚ್ಚರಿಸಿದರು.
ಪಟ್ಟಣದಲ್ಲಿನ ಸ್ವಚ್ಛತೆ ಕುರಿತ ಚರ್ಚೆಯಲ್ಲಿ ಯುವ ಸದಸ್ಯ ಶ್ರೀಧರ್ ಮಾತನಾಡಿ, ಪುರಸಭೆಯ ಪರಿಸರ ಎಂಜಿನೀಯರ್ ಅವರ ನಿವಾಸದ ಪಕ್ಕದಲ್ಲಿಯೇ ನೈರ್ಮಲ್ಯದ ಕೊರತೆ ಇದೆ. ಇನ್ನು ಪಟ್ಟಣದಲ್ಲಿ ಸ್ವಚ್ಛತೆ ಹೇಗೆ ಸಾಧ್ಯ ಎಂದು ಪರಿಸರ ಇಂಜಿನೀಯರ್ ಅವರ ಕಾರ್ಯವೈಖರಿ ಕುರಿತು ಕುಟುಕಿದರು. ನೂತನ ಚುನಾಯಿತ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರುಗಳಿಗೆ ಲೆಟರ್ಹೆಡ್, ರಬ್ಬರ್ ಸ್ಟಾಂಪ್, ವಿಸಿಟಿಂಗ್ ಕಾರ್ಡ್
ಹಾಗೂ ಹೆಸರು ಬೋರ್ಡ್ಗಳನ್ನು ಮಾಡಿಸಿಕೊಡುವ ವಿಚಾರ ಬಂದಾಗ ಪಕ್ಷೇತರ ಸದಸ್ಯ ರಂಗನಾಥ್ ಮಾತನಾಡಿ, ಇದೆಲ್ಲಕ್ಕಿಂತಲೂ ಮೊದಲು ನಮಗೆ ಪುರಸಭೆಯ ನೀತಿ ನಿಯಮಗಳು, ಸದಸ್ಯರ ಜವಾಬ್ದಾರಿ ಹಾಗೂ ಅವರಿಗಿರುವ ಹಕ್ಕುಗಳ ಕುರಿತಾದ ಮಾಹಿತಿ ಪುಸ್ತಕ ನೀಡುವಂತೆ ಸೂಚಿಸಿದರು.
ಪಟ್ಟಣದ ಬಸ್ ನಿಲ್ದಾಣ ಸಮೀಪದಲ್ಲಿನ ಕಣ್ಣಿನ ಆಸ್ಪತ್ರೆಯ ಪಕ್ಕದಲ್ಲಿ ಬಸ್ಶೆಲ್ಟರ್ ನಿರ್ಮಾಣ, ಪುರಸಭೆ ವ್ಯಾಪ್ತಿಯಲ್ಲಿ ಕೆಟ್ಟುನಿಂತಿರುವ ಕೈಪಂಪುಗಳನ್ನು ದುರಸ್ಥಿ ಪಡಿಸುವ, ಒಳಚರಂಡಿ ವ್ಯವಸ್ಥೆಯ ಮ್ಯಾನ್ಹೋಲ್ ಗಳ ರಿಂಗ್ ಹಾಗೂ ಮುಚ್ಚಳಗಳನ್ನು ಖರೀದಿಸುವ ಹಾಗೂ ಇನ್ನಿತರ ವಿಷಯಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಉಪಾಧ್ಯಕ್ಷ ರಘುರಾಮ್, ಮುಖ್ಯಾಧಿಕಾರಿ ಹರೀಶ್ ಮೊದಲಾದವರು ಇದ್ದರು.


ನೂತನ ಚುನಾಯಿತ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರುಗಳಿಗೆ ಲೆಟರ್ಹೆಡ್, ರಬ್ಬರ್ ಸ್ಟಾಂಪ್, ವಿಸಿಟಿಂಗ್ ಕಾರ್ಡ್ ಹಾಗೂ ಹೆಸರು ಬೋರ್ಡ್ಗಳನ್ನು ಮಾಡಿಸಿಕೊಡುವ ಮೊದಲು ನಮಗೆ ಪುರಸಭೆಯ ನೀತಿ ನಿಯಮಗಳು, ಸದಸ್ಯರ ಜವಾಬ್ದಾರಿ ಹಾಗೂ ಅವರಿಗಿರುವ ಹಕ್ಕುಗಳ ಕುರಿತಾದ ಮಾಹಿತಿ ಪುಸ್ತಕ ವಿತರಿಸಿ.
ಟಿ  ರಂಗನಾಥ್ , ಪಕ್ಷೇತರ ಸದಸ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement