ಪ್ರವಾಸಿಗರ ಪಾಲಿಗೆ ಸ್ವರ್ಗವೇ ಧರೆಗಿಳಿದಂತೆ...
ಕ.ಪ.ವಾರ್ತೆ ಸಕಲೇಶಪುರ ಅ. 9
ತಾಲೂಕಿನನಲ್ಲಿ ವಾರದಿಂದ ಮಳೆ ಬೀಳುತ್ತಿದೆ. ಈ ಮಳೆ ಮಲೆನಾಡಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿರುವುದಲ್ಲದೇ ಸುರಿಯುತ್ತಿರುವ ಮಂಜಿನಿಂದಾಗಿ ರಮಣೀಯ ದೃಶ್ಯ ನೋಟಕ್ಕೆ ರಂಗು ತಂದಿದೆ.
ಹಚ್ಚ ಹಸಿರನ್ನು ಹೊದ್ದುಕೊಂಡು ಮಲಗಿರುವ ದಟ್ಟ ಕಾನನದ ಬೆಟ್ಟಗುಡ್ಡಗಳ ಮಧ್ಯೆ ಹರಿಯುವ ಜರಿ, ತೊರೆ ಹಾಗೂ ಹಚ್ಚ ಹಸಿರಿನ ಆಸ್ವಾದಕ್ಕಾಗಿ ಬರುವ ಪ್ರವಾಸಿಗರಿಗೆ ಈಗ ಮಂಜು ಮಳೆಯ ರಮಣೀಯ ದೃಶ್ಯ ಸಹ ಲಭ್ಯ. ತಾಲೂಕಿನಲ್ಲಿ ಮಳೆಯ ಅಸ್ವಾದಕ್ಕಾಗಿ ಬರುವ ಪ್ರವಾಸಿಗರ ಸಂಖ್ಯೆ ಲಕ್ಷಕ್ಕೂ ಹೆಚ್ಚಿದೆ. ಮಳೆಗಾಲದಲ್ಲಿ ತಾಲೂಕಿನಲ್ಲಿರುವ ಸುಮಾರು 40 ಕ್ಕೂ ಹೆಚ್ಚಿನ ರೆಸ್ಟೋರೆಂಟ್ ಹಾಗೂ ಹೊಂಸ್ಟೇಗಳು ವಾರದ ಮೊದಲೇ ಭರ್ತಿಯಾಗಿವೆ. ಕೊಠಡಿಗಳು ಸಿಗುವುದು ಅಸಾಧ್ಯ ಎಂಬ ಸನ್ನಿವೇಶವಿದೆ.
ಗ್ರಾಮಾಂತರ ಪ್ರದೇಶದಲ್ಲಿ ದಟ್ಟಮಂಜು ಬೀಳುತ್ತಿದ್ದು ರಸ್ತೆ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಹಗಲುವೇಳೆಯೇ ವಾಹನಗಳು ಹೆಡ್ಲೈಟ್ ಹಾಕಿ ಕೊಂಡು ಹೋಗುವುದು ಇಲ್ಲಿ ಸಾಮಾನ್ಯವಾಗಿದೆ. ಈ ದಟ್ಟಮಂಜಿನ ಮಧ್ಯೆ ಜಿನುಗುಮಳೆ ಬೀಳುತ್ತಿದ್ದು ವಾತಾವರಣದ ಸೊಬಗನ್ನು ಹೆಚ್ಚಿಸಿದೆ. ಶೀತದ ವಾತಾವರಣದಲ್ಲೂ ತಾಲೂಕಿಗೆ ಬರುವ ಪ್ರವಾಸಿಗರು ಮಳೆಯಲ್ಲೆ ನೆನೆದು ಮಂಜಿನ ಆಸ್ವಾದಮಾಡುವುದು ಎಲ್ಲೆಡೆ ಕಾಣುತಿದೆ. ಒಟ್ಟಿನಲ್ಲಿ ಕಳೆದೊಂದು ವಾರದಿಂದ ತಾಲೂಕಿನ ವಾತಾವರಣದಲ್ಲಿ ಭಾರೀ ಬದಲಾವಣೆಯಾಗಿದ್ದು ಪ್ರವಾಸಿಗರ ಪಾಲಿಗೆ ಸ್ವರ್ಗವನ್ನೇ ಸೃಷ್ಟಿಸಿದಂತಿದೆ.