ಪ್ಲಾಸ್ಟಿಕ್ ಬಕೆಟ್ನಲ್ಲೂ ಅವ್ಯವಹಾರ
ಕನ್ನಡಪ್ರಭ ವಾರ್ತೆ ಹಾಸನ ಅ. 9
ಸ್ವಚ್ಛತೆಗೆ ಸಂಬಂಧಿಸಿದಂತೆ ನಗರದಲ್ಲಿ ನಾಗರಿಕರಿಗೆ ವಿತರಣೆ ಮಾಡಿರುವ ಪ್ಲಾಸ್ಟಿಕ್ ಬಕೆಟ್ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಸಂಬಂಧ ಲೋಕಾಯುಕ್ತ ತನಿಖೆಯಾಗಬೇಕು ಎಂದು ಕೆಲ ಸದಸ್ಯರು ಬುಧವಾರ ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಬಿಜೆಪಿ ಸದಸ್ಯ ರಮೇಶ್ಬಾಬು ಮಾತನಾಡಿ, ನಗರದಲ್ಲಿನ ಕಸ ಸಂಗ್ರಹಣೆಗಾಗಿ ಸುಮಾರು 57 ಸಾವಿರ ಪ್ಲಾಸ್ಟಿಕ್ ಬಕೆಟ್ಗಳನ್ನು ವಿತರಣೆ ಮಾಡಲಾಗಿದೆ. ಪ್ರತಿ ಬಕೆಟ್ಗೆ 147 ರು.ನಂತೆ ಖರೀದಿಸಿದ್ದು, ಸುಮಾರು 77 ಲಕ್ಷ ರು.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗಿದೆ. ಆದರೆ ಖರೀದಿಸಿರುವ ಬಕೆಟ್ಗಳ ಗುಣಮಟ್ಟ ಚೆನ್ನಾಗಿಲ್ಲ. ಆ ಬಕೆಟ್ಗಳು 30 ರು. ಕೂಡಾ ಬೆಲೆ ಬಾಳುವುದಿಲ್ಲ. ಅಂತಹ ಬಕೆಟ್ಗಳಿಗೆ ಹೆಚ್ಚಿನ ಬೆಲೆಯನ್ನು ನೀಡಲಾಗಿದೆ. ಆದ್ದರಿಂದ ಇದರಲ್ಲೆನ್ನೋ ಅವ್ಯವಹಾರ ನಡೆದಿದ್ದು, ಈ ಸಂಬಂಧ ಲೋಕಾಯುಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕಡಿಮೆ ಗುಣಮಟ್ಟದ ಬಕೆಟ್ಗಳನ್ನು ನೀಡುವ ಮೂಲಕ ಸಾರ್ವಜನಿಕ ಹಣವನ್ನು ವಂಚಿಸಲಾಗಿದೆ. ಕಡಿಮೆ ಬೆಲೆಬಾಳುವ ಬಕೆಟ್ಗೆ ಹೆಚ್ಚಿನ ದರವನ್ನು ನಿಗದಿ ಮಾಡಿ ಹಣವನ್ನು ವ್ಯರ್ಥ ಮಾಡಲಾಗಿದೆ ಎಂದು ದೂರಿದರು. ಅವ್ಯವಹಾರ ನಡೆದಿಲ್ಲ: ಪ್ಲಾಸ್ಟಿಕ್ ಬಕೆಟ್ ಖರೀದಿಗೆ ಸಂಬಂಧವಾಗಿ ನಗರಸಭೆಯ ಯಾವುದೇ ತಪ್ಪಿಲ್ಲ. ಇದು ನೇರವಾಗಿ ಜಿಲ್ಲಾಡಳಿತದಿಂದ ಟೆಂಡರ್ ಆಗಿ ಗುತ್ತಿಗೆದಾರರು ನಗರಸಭೆಗೆ ನೀಡಲಾಗಿದೆ. ಇದರಲ್ಲಿ ನಗರಸಭೆಯ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಆಯುಕ್ತ ನಾಗಭೂಷಣ್ ಸ್ಪಷ್ಟಪಡಿಸಿದರು.
ಸದಸ್ಯ ಯಶವಂತ್, ರಮೇಶ್ಬಾಬು ಇತರರು ಮಾತನಾಡಿ, ನಗರಕ್ಕೆ ಸುಮಾರು 150 ಸೋಡಿಯಂ ಲೈಟ್ಗಳು ಬಂದಿವೆ. ಈ ಬಗ್ಗೆ ಸದಸ್ಯರಿಗೆ ಸರಿಯಾಗಿ ಮಾಹಿತಿಯನ್ನು ನೀಡಿಲ್ಲ. ತಮಗೆ ಬೇಕಾದ ಕಡೆಗಳಲ್ಲಿ ಲೈಟ್ಗಳನ್ನು ಹಾಕಲಾಗಿದೆ. ಬಾರ್, ನರ್ಸಿಂಗ್ ಹೋಂಗಳ ಮುಂದೆ ಹಾಕಲಾಗಿದೆ ಎಂದು ಆರೋಪಿಸಿದರೆ, ಸದಸ್ಯ ಸುರೇಶ್ಕುಮಾರ್ ಮಾತನಾಡಿ, ನನ್ನ ವಾರ್ಡ್ನಲ್ಲಿ 34 ಲೈಟಟ್ಗಳನ್ನು ಅಳವಡಿಸಿದ್ದಾರೆ ಎನ್ನಲಾಗಿದೆ. ಕೇವಲ 5 ಲೈಟ್ಗಳನ್ನು ಹಾಕಲಾಗಿದೆ. ಉಳಿದನೆಲ್ಲ ಬಿ.ಎಂ.ರಸ್ತೆಗೆ ಹಾಕಲಾಗಿದೆ ಎಂದರು.
ಇದಕ್ಕೆ ಆಯುಕ್ತರು ವಾರ್ಡ್ ನಂ.23ರಲ್ಲಿ 4, 31ನೇ ವಾರ್ಡ್ನಲ್ಲಿ 12, 13ನೇ ವಾರ್ಡ್ ನಲ್ಲಿ 4, 14ನೇ ವಾರ್ಡ್ ನಲ್ಲಿ 1, 10ನೇ ವಾರ್ಡ್ ನಲ್ಲಿ 5, 9ನೇ ವಾರ್ಡ್ ನಲ್ಲಿ 5, 8ನೇ ವಾರ್ಡ್ ನಲ್ಲಿ 27, 7ನೇ ವಾರ್ಡ್ ನಲ್ಲಿ 18, 6ನೇವಾರ್ಡ್ ನಲ್ಲಿ 3, 5ನೇ ವಾರ್ಡ್ನಲ್ಲಿ 10, 16ನೇ ವಾರ್ಡ್ ನಲ್ಲಿ 1, 3ನೇ ವಾರ್ಡ್ನಲ್ಲಿ 34 ಲೈಟ್ಗಳನ್ನು ಅಳವಡಿಸಲಾಗಿದೆ. ಮುಂದೆ ಸದಸ್ಯರ ಗಮನಕ್ಕೆ ತಿಳಿಸಿಯೇ ಲೈಟ್ಗಳನ್ನು ಹಾಕಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಸದಸ್ಯರ ಗಮನಕ್ಕೆ ತಂದೇ ಸೋಡಿಯಂ ಲೈಟ್ಗಳನ್ನು ಹಾಕಲಾಗುತ್ತದೆ. ಅಷ್ಟೇ ಅಲ್ಲದೆ ಯಾವ ವಾರ್ಡ್ಗಳಲ್ಲಿ ಲೈಟ್ಗಳನ್ನು ಅಳಡಿಸಿಲ್ಲ ಹಾಗೂ ಎಷ್ಟು ಅವಶ್ಯಕತೆ ಇದೆ ಅಂತ ಮಾಹಿತಿ ನೀಡಿದರೆ ಲೈಟಟ್ಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು.
3000 ರು.ಚದರಡಿಗೆ ನಿಗದಿ: ಹಾಸನಾಂಬ ದೇವಾಲಯದ ಅಭಿವೃದ್ಧಿ ವಿಷಯದಲ್ಲಿ ದೇವಾಲಯದ ದಕ್ಷಿಣ ಭಾಗದಲ್ಲಿ ಕಾಂಪೌಂಡ್ಗೆ ಹೊಂದಿಕೊಂಡಂತೆ ಇರುವ ಈ 9 ಮನೆಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸದಸ್ಯ ಪ್ರಸನ್ನ ಕುಮಾರ್, ಪ್ರಸನ್ನ ಕೃಷ್ಣಮೂರ್ತಿ ಒತ್ತಾಯಿಸಿದರು.
ಪ್ರಸ್ತುತ ಸರ್ಕಾರದ ದರದ ಪ್ರಕಾರ 1500 ರು. ಅಡಿಗೆ ಇದ್ದು, ಖಾಸಗಿಯಲ್ಲಿ 4500 ರು.ಗಳು ಇದೆ. ಆದ್ದರಿಂದ 3 ಸಾವಿರ ರು.ಗಳ ದರವನ್ನು ನಿಗದಿ ಪಡಿಸುವಂತೆ ಸರ್ವ ಸದಸ್ಯರ ಒಪ್ಪಿಗೆಯಿಂದ ತೀರ್ಮಾನಿಸಲಾಯಿತು.
ಶಾಸಕ ಪ್ರಕಾಶ್ ಮಾತನಾಡಿ, ನಗರಸಭೆಯಿಂದ ನೀಡಬೇಕಾದಂತಹ ಹಣವನ್ನು ಅವರಿಗೆ ಒದಗಿಸಿ, ಈ 9 ಕುಟುಂಬಗಳಿಗೆ ಸೂಕ್ತ ಸ್ಥಳದಲ್ಲಿ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡೋಣ ಎಂದರು.
ಸದಸ್ಯ ಗೋಪಾಲ್, ಯಶವಂತ್ ಮಾತನಾಡಿ, ಗೊರೂರು ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಇರುವ ನಗರಸಭಾ ಮಳಿಗೆಗಳು ತುಂಬಾ ಶಿಥಿಲಾವಸ್ಥೆಯಲ್ಲಿ ಇರುವುದನ್ನು ದುರಸ್ತಿ ಮಾಡಿಸಿಕೊಡಬೇಕು ಹಾಗೂ ಈ ಅಂಗಡಿಗಳ ಠೇವಣಿ ಹಾಗೂ ಬಾಡಿಗೆ ಹೆಚ್ಚಿಸಲಾಗಿದೆ. 900 ರು. ಇದ್ದ ಬಾಡಿಗೆ ಹಣವನ್ನು 6700 ರು.ಗಳಿಗೆ ಏರಿಸಲಾಗಿದೆ. ಬಾಡಿಗೆ ಹೆಚ್ಚಿದಂತೆ ಅದಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಆದ್ದರಿಂದ ವ್ಯಾಪಾರಸ್ಥರಿಗೂ ಹಾಗೂ ನಗರಸಭೆಗೆ ನಷ್ವವಾಗದಂತೆ ದರವನ್ನು ನಿಗದಿ ಮಾಡಬೇಕು ಎಂದು ಹೇಳಿದರು.
ನಗರದ ರಾಮಕೃಷ್ಣವಿದ್ಯಾಲಯ ಸಮೀಪ ಇರುವ ನಗರಸಭೆ ಜಾಗ ಆಟದ ಮೈದಾನಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ಅಲ್ಲಿ ಟ್ರಂಚ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಬೇನಾಮಿ ಹೆಸರಿಗೆ ಖಾತೆಯನ್ನು ಮಾಡಿಸಲಾಗಿದೆ ಎಂದು ಆರೋಪಿಸಿದ ಸದಸ್ಯ ಅನಿಲ್ಕುಮಾರ್, ಯಶವಂತ್ ಅವರು, ಕೂಡಲೇ ಆ ಜಾಗವನ್ನು ಯಾರು ಖಾತೆ ಮಾಡಿಸಿಕೊಂಡಿದ್ದಾರೆ ಹಾಗೂ ಟ್ರಂಚ್ ಮಾಡುತ್ತಿದ್ದಾರೆ ಎಂದು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಇರ್ಷಾದ್, ಸದಸ್ಯರು ಇತರರು ಇದ್ದರು.