ವಿವಾದಿತ ಸ್ಥಳಕ್ಕೆ ಎಸಿ ಭೇಟಿ ನೀಡಿ ಪರಿಶೀಲನೆ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಇಲ್ಲಿನ ಗ್ರಾಮ ಪಂಚಾಯ್ತಿ ಪಂಪ್ಹೌಸ್ ಹತ್ತಿರದ ವಿವಾದಿತ ಜಾಗಕ್ಕೆ ಉಪ ವಿಭಾಗಾಧಿಕಾರಿ ಬಿ. ಶರತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ದಲಿತರ ಗುಂಪಿನ ಕಡೆ ಮುಖಂಡರನ್ನು ಕರೆಸಿ ಅವರ ಹೇಳಿಕೆ ಕೇಳಿ, ಎರಡೂ ಗುಂಪಿನ ಕಡೆಯಿಂದ ಒಮ್ಮತದ ತೀರ್ಮಾನ ಬಂದರೆ ಎರಡು ಕಡೆ ಅರ್ಜಿ, ರೆಕಾರ್ಡ್ಗಳನ್ನು ಕೊಡಿ, ಅವನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಗ್ರಾಪಂ ಕಚೇರಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ದಲಿತ ಮುಖಂಡರನ್ನು ಕರೆಸಿ ಶಾಂತಿ ಸಭೆ ನಡೆಸಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಜಗಳ ಘರ್ಷಣೆಯಾದರೆ ವೃಥಾ ಹಿಂಸೆ ಅನುಭವಿಸಬೇಕಾಗುತ್ತೆ. ನೆಮ್ಮದಿ ಹಾಳಾಗುತ್ತದೆ. ಎರಡು ಕಡೆ ಬೋರ್ಡ್ಗಳನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಪೊಲೀಸರು ತೆಗೆಸುವುದರಿಂದ ಊರಿನಲ್ಲಿ ನೆಮ್ಮದಿ ಇರುತ್ತದೆ, ಹಾಗಾಗಿ ತೆಗೆಸುವಂತೆ ಅವರು ಸೂಚಿಸಿದರು. ತಹಸೀಲ್ದಾರ್ ಡಾ. ಎಚ್.ಎಲ್. ನಾಗರಾಜ್, ಉಪ ತಹಸೀಲ್ದಾರ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷ ರಂಗಸ್ವಾಮಿ, ಪಿಡಿಓ ಉಮಾಶಂಕರ್, ಗ್ರಾಪಂ ಕಾರ್ಯದರ್ಶಿ ಎನ್.ಎ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಗೋಪಾಲ್, ಮಂಜುನಾಥ್, ಮಹೇಶ್, ಶೇಖರ್ ಎಎಸ್ಐ ಪುಟ್ಟರಾಜು ಇತರರು ಇದ್ದರು.