80 ಅಡಿ ರಸ್ತೆ ಪೂರ್ಣಗೊಳಿಸಲು ಮನವಿ
ಹಾಸನ: ನಗರದ ಹುಣಸಿನಕೆರೆ ಬಡಾವಣೆ ಚಿಪ್ಪಿನಕಟ್ಟೆ, ಪೆನ್ಷನ್ ಮೊಹಲ್ಲಾ, ಆದರ್ಶನಗರ, ರಾಜಕುಮಾರ್ ನಗರ, ಶಾಂತಿನಗರ ಮುಖಾಂತರ ಹಾದು ಹೋಗುವ 80 ಅಡಿ ರಸ್ತೆ ಅಗತ್ಯವಾಗಿದ್ದು, ಅದನ್ನು ಪೂರ್ಣಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬಡಾವಣೆ ನಿವಾಸಿಗಳು ಮುಖ್ಯಮಂತ್ರಿಗಳಿಗೆ ಜನತಾದರ್ಶನದಲ್ಲಿ ಮನವಿ ಸಲ್ಲಿಸಿದರು.
ಹಳೇಬೀಡು-ಸಾಲಗಾಮೆ ಕಡೆಯಿಂದ ಎಪಿಎಂಸಿ ಆವರಣಕ್ಕೆ ಬರುವ ರೈತಾಪಿ ಕುಟುಂಬಗಳಿಗೆ ಬಹಳ ಉಪ ಯುಕ್ತ ರಸ್ತೆಯಾಗಿದೆ. ಈ ರಸ್ತೆಯು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಅರ್ಧಂಬರ್ಧವಾಗಿದೆ. ಈ ಬಗ್ಗೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಜನತಾ ದರ್ಶನದಲ್ಲಿ ನಾಗರಿಕರು ದೂರಿದರು. ಹಬೀಬಿಯಾ ಸಮಿಲ್ ಅಂಗಡಿ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸಲಾಗಿದೆ. ಇದರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.