ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಂಗ್ರೆಸ್ ಸರ್ಕಾರದ ಬಗ್ಗೆ ಅಧ್ಯಕ್ಷರಿಗೇ ನಂಬಿಕೆಯಿಲ್ಲ: ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನ ಭಟ್

Rashmi Kasaragodu
Updated On : 10 Oct 2013, 11:22 am

ಚನ್ನರಾಯಪಟ್ಟಣ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಆ ಪಕ್ಷದ ಅಧ್ಯಕ್ಷರಿಗೆ ನಂಬಿಕೆಯಿಲ್ಲದಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನ ಭಟ್ ತಿಳಿಸಿದರು.
 ಪಟ್ಟಣದ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರವಣಬೆಳಗೊಳ ಮಂಡಲ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಟ್ ಮಾತನಾಡಿದರು.
  ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಪಕ್ಷದ ಅಧ್ಯಕ್ಷ ಪರಮೇಶ್ವರ್ ಅವರಿಗೆ ನಂಬಿಕೆಯಿಲ್ಲದ ಕಾರಣ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
 ಪಕ್ಷದ ಅಧ್ಯಕ್ಷರೇ ಮುಖ್ಯಮಂತ್ರಿಗಳ ಮೇಲೆ ನಂಬಿಕೆಯಿಲ್ಲದೆ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು  ಟೋಪಿ ಹಾಕುವ ಕಾರ್ಯಕ್ರಮವೆಂದು ಟೀಕಿಸಿದ್ದು, ನಾಡಿನ ಜನತೆಗೆ ಇವರ ಒಳಜಗಳ ಹೊರ ಬಂದಿರುವುದನ್ನು ತಿಳಿಸುತ್ತದೆ.  
 ರಾಜ್ಯದ ಮುಖ್ಯಮಂತ್ರಿಗಳು ಅವಸರದಿಂದ ಹಾಗೂ ಪ್ರಚಾರ ಗಿಟ್ಟಿಸಲು ಕೈ ಗೊಂಡ ಕಾರ್ಯಕ್ರಮಗಳಿಂದ ಅವರಿಗೆ ಹೆಸರು ಬರುತ್ತಿದೆಯೋ ತಿಳಿಯದಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಜನಸಾಮಾನ್ಯರು ತೆರಿಗೆ ಕಟ್ಟಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ ಲಾಭ ಮಾಡಲು ಕಾರಣರಾಗಿದ್ದಾರೆ ಎಂದು ನುಡಿದರು.
 ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಬಿಜೆಪಿ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ದೇಶದಲ್ಲಿ ಬಿಜೆಪಿ ಅಲೆ ಎದ್ದಿದ್ದು, ಗುಜರಾತ್ನಲ್ಲಿ ಆಗಿರುವ ಅಭಿವೃದ್ಧಿ ಇಡೀ ದೇಶದಲ್ಲಾಗಿ ದೇಶದ ಅಭಿವೃದ್ಧಿಗೆ ಕಾರ್ಯಕರ್ತರು ಶ್ರಮಿಸಬೇಕೆಂದು ತಿಳಿಸಿದರು.
 ದಿನಕ್ಕೊಂದು ಮಾತು ಬದಲಿಸುತ್ತಿರುವ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಕಾಂಗ್ರೆಸ್ ಬಿಂಬಿಸುತ್ತಿದ್ದು, ಅವರ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಬಾಯಿಗೆ ಬಂದಂತೆ ಹೇಳಿಕೆ ನೀಡುವ ವ್ಯಕ್ತಿಗೆ ದೇಶದ ಚುಕ್ಕಾಣಿ ನೀಡಿದರೆ ದೇಶದ ಸ್ಥಿತಿ ಏನೆಂದು ಭಾವಿಸಬೇಕು ಎಂದು ಟೀಕಿಸಿದರು.
 ಹಾಸನ ಲೋಕಸಭಾ ಕ್ಷೇತ್ರದಿಂದ ಇದು ತನ್ನ ಕೊನೆ ಚುನಾವಣೆಯೆಂದು ಜನತೆಯನ್ನು ನಂಬಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿರುವ ದೇವೇಗೌಡರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
 ಜಿಲ್ಲಾಧ್ಯಕ್ಷ ರೇಣುಕುಮಾರ್, ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿಲ್ಲಾ ಮಾಜಿ ಉಪಾಧ್ಯಕ್ಷ ಪಟೇಲ್ ಮಂಜುನಾಥ್, ತಾಲೂಕು ಮಾಜಿ ಅಧ್ಯಕ್ಷ ಎ.ಆರ್.ನಾಗರಾಜು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಶುಭಕರ್, ಪ್ರಸನ್ನಕುಮಾರ್,  ಚನ್ನಕೇಶವ, ಪಕ್ಷದ ತಾಲೂಕು ಮುಖಂಡ ನಂಜುಂಡ ಮೈಮ್, ಗಣೇಶ್, ಕನ್ನಡ ವಾಸು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು. ತಾಲೂಕು ಅಧ್ಯಕ್ಷ ರಂಗೇಗೌಡ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement