ಮಾನಸಿಕ ಖಿನ್ನತೆಯಿಂದ ನಾನಾ ಸಮಸ್ಯೆಗೆ ತುತ್ತು : ನ್ಯಾ. ಸೋಮಶೇಖರ್
ಕನ್ನಡಪ್ರಭ ವಾರ್ತೆ ಹಾಸನ ಅ.10
ಮಾನಸಿಕ ಖಿನ್ನತೆಯಿಂದ ಹಲವು ಮಂದಿ ಒತ್ತಡಕ್ಕೆ ಒಳಗಾಗುತ್ತಿದ್ದು, ಇದರಿಂದ ಅನೇಕರು ಅನಾರೋಗ್ಯ, ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅಂತಹವರಿಗೆ ಸೂಕ್ತ ಚಿಕಿತ್ಸೆ ಕಾನೂನಿನ ರಕ್ಷಣೆ ಅಗತ್ಯವಿದೆಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಸೋಮಶೇಖರ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಕಾನೂನು ಕಾಲೇಜು, ಭಾರತೀಯ ಹಿಂದುಳಿದ ವರ್ಗಗಳ ಸಾಮಾಜಿಕ ಸೇವಾ ಹಾಗೂ ಎಜುಕೇಷನ್ ಡೆವಲಪ್ಮೆಂಟ್ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ, ರಕ್ತದಾನ ಶಿಬಿರ ಹಾಗೂ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತಿದೆ. ಅದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ಉಚಿತ ಕಾನೂನು ನೆರವು ಒದಗಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಯಾವುದೇ ವ್ಯಕ್ತಿ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಕೊಡಿಸಲು ಮನೆಯವರಿಗೆ ಆರ್ಥಿಕ ತೊಂದರೆ ಇದ್ದಲ್ಲಿ ಮತ್ತು ಅಂತಹ ವ್ಯಕ್ತಿಗಳಿಂದ ಶಾಂತಿ ಭಂಗವಾಗುತ್ತಿದ್ದಲ್ಲಿ ಅಂತಹವರನ್ನು ಸಮೀಪದ ಪೊಲೀಸ್ ಠಾಣೆಗೆ ಹಾಜರುಪಡಿಸಿದಲ್ಲಿ ಪೊಲೀಸರ ಸಹಾಯದಿಂದ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅಥವಾ ನ್ಯಾಯಾಲಯದ ಮೂಲಕ ಮಾನಸಿಕ ರೋಗ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಿ ಚಿಕಿತ್ಸೆ ಕೊಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.
ಇದೇ ವೇಳೆ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಿದ್ದ ಭಾರತೀಯ ಹಿಂದುಳಿದ ವರ್ಗ, ಸಾಮಾಜಿಕ ಸೇವೆ ಹಾಗೂ ಎಜುಕೇಷನ್ ಡೆವಲಪ್ಮೆಂಟ್ ಟ್ರಸ್ಟ್ ಪದಾಧಿಕಾರಿಗಳನ್ನು ಸೋಮಶೇಖರ್ ಅಭಿನಂದಿಸಿದರು.
ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿ ಮನುಷ್ಯನೂ ಇರುವುದರಲ್ಲಿ ತೃಪ್ತ್ತಿ ಪಡುವ ಗುಣ ಬೆಳೆಸಿಕೊಂಡು ಕೋಪ ಅಜ್ಞಾನಗಳಿಗೆ ಮನಸ್ಸನ್ನು ಬಲಿಕೊಡದಿದ್ದಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದುತ್ತಾನೆ ಎಂದರು.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ನೆರವು, ಆಶ್ರಯ ಅತ್ಯಗತ್ಯ. ನಾನಾ ಸಂಘ ಸಂಸ್ಥೆಗಳ ಪ್ರಯತ್ನಕ್ಕೆ ತಮ್ಮ ಮಠದಿಂದಲೂ ಸಹಕಾರ ನೀಡಲು ಸಿದ್ಧ ಎಂದು ಅವರು ಪ್ರಕಟಿಸಿದರು.
ಪ್ರಧಾನ ಹಿರಿಯ ನ್ಯಾ. ಎಸ್.ಎ.ಮುಸ್ತಫ ಹುಸೇನ್ ಮಾತನಾಡಿ, ಪ್ರತಿಯೊಬ್ಬರೂ ಒಂದಿಲ್ಲೊಂದು ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿರುತ್ತಾರೆ.
ಸಂಶಯ, ಸಿಟ್ಟು, ಅನುಮಾನ, ಅಸಮಾಧಾನ, ತಾಳ್ಮೆ ತಪ್ಪುವುದು ಸಹ ಇಂತಹ ಗುಣಲಕ್ಷಣಗಳೇ. ಹಾಗಾಗಿ ಸಂಪೂರ್ಣ ಮಾನಸಿಕವಾಗಿ ಸಮಸ್ಯೆಗೆ ಸಿಲುಕಿದವರ ಮೇಲೆ ಕೆಟ್ಟ ಅಭಿಪ್ರಾಯ ಮಾಡದೆ ಅನುಕಂಪ ತೋರಿ ಸಲಹಬೇಕು ಮತ್ತು ಮಾನವೀಯತೆ ತೋರಬೇಕು ಎಂದು ಹೇಳಿದರು.
ಮನೋವೈದ್ಯೆ ಡಾ.ಭಾರತಿ ಮಾತನಾಡಿ, ಮಾನಸಿಕ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸೆಗಳಿವೆ. ಎಲ್ಲಾ ರೀತಿಯ ಮಾನಸಿಕ ಕಾಯಿಲೆಗಳಿಗೆ ಜೀವಮಾನವಿಡೀ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ. ಸೂಕ್ತ ಸಮಯಕ್ಕೆ ಅಗತ್ಯ ಔಷದೋಪಚಾರ ಚಿಕಿತ್ಸೆ ದೊರೆತರೆ ಅನೇಕ ರೀತಿಯ ತೊಂದರೆಗಳನ್ನು ಬಗೆಹರಿಸಬಹುದು ಎಂದರು.
ಲಯನ್ಸ್ ಅಧ್ಯಕ್ಷ ಗಿರೀಶ್ ಸಂಸ್ಥೆಯಿಂದ ನೀಡಲಾಗುವ ನೆರವುಗಳ ಬಗ್ಗೆ ವಿವರಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ, ಆರೋಗ್ಯ ಇಲಾಖೆಯ ಡಾ. ಹೇಮಲತಾ, ಡಾ. ರಾಜಗೋಪಾಲ್, ಶಬ್ಬೀರ್ ಭಾರತೀಯ ಹಿಂದುಳಿದ ವರ್ಗ, ಸಾಮಾಜಿಕ ಸೇವೆ ಹಾಗೂ ಸುಲೈಮಾನ್, ಸೀಮಾ ಪರ್ವಿನ್, ಮಂಜುನಾಥ ಇದ್ದರು.