'ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ'
ಹಾಸನ: ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ರಕ್ತವನ್ನು ಪರಿಪೂರ್ಣವಾಗಿ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ ಎಂದು ಮಕ್ಕಳ ತಜ್ಞ ಡಾ. ದಿನೇಶ್ ಕಬ್ಳಿಗೆರೆ ತಿಳಿಸಿದರು.
ನಗರದ ಕೆ.ಆರ್. ಪುರಂನ ವಿಜಯ ಆಂಗ್ಲ ಶಾಲೆಯಲ್ಲಿ ರೋಟರಿ ಹಾಸನ ಮಿಡ್ಟೌನ್ ಸಂಸ್ಥೆ, ಇಂಟರ್ಯಾಕ್ಟ್ ವತಿಯಿಂದ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತವನ್ನು ದಾನದಿಂದ ಮಾತ್ರ ಪಡೆಯಬಹುದು.
ಈ ರೀತಿ ಪಡೆಯುವುದರಿಂದಲೇ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ ಎಂದು ಹೇಳಿದರು.
ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಮಹಿಳೆಯರು ಮಾತ್ರ ತಿಂಗಳ ಮುಟ್ಟಿನ ಸಮಯ ಹಾಗೂ ಗರ್ಭಿಣಿಯರಾಗಿದ್ದ ಸಂದರ್ಭದಲ್ಲಿ, ಎದೆಹಾಲು ಉಣಿಸುತ್ತಿರುವಾಗ ಮತ್ತು ಹೆರಿಗೆ ನಂತರ 6 ತಿಂಗಳು ರಕ್ತದಾನ ಮಾಡಬಾರದು ಎಂದು ಹೇಳಿದರು.
ರೋಟರಿ ಮಿಡ್ಟೌನ್ ಅಧ್ಯಕ್ಷ ಆರ್. ಸತ್ಯನಾರಾಯಣ್ ಹಾಗೂ ಹಾಸನ ರಕ್ತನಿಧಿಯ ಮುಖ್ಯಸ್ಥ ಡಾ.ಎಚ್.ಆರ್. ದೇವದಾಸು ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು. ರೋಟರಿ ಸೇವಾ ವಿಭಾಗ ಅಧ್ಯಕ್ಷ ತಾರಾ ಎಸ್. ಸ್ವಾಮಿ ಹಾಗೂ ಇಂಟೆರ್ಯಾಕ್ಟ್ ಸಂಚಾಲಕ ವರ್ಗೀಸ್ ಮಾರ್ಗದರ್ಶನದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ರೋಟರಿ ಮಿಡ್ಟೌನ್ ಕುಟುಂಬದವರು, ವಿಜಯ ಆಂಗ್ಲ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕರೇತರ ವೃಂದದವರು, ವೈದ್ಯರು, ವಿಜಯ ಶಾಲೆಯ ಮಕ್ಕಳ ಪೋಷಕರು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಡಾ.ವೈ.ಎಸ್. ಜಗದೀಶ್, ಎ.ಎಂ.ರಘು, ಶಿವಕುಮಾರ್, ಸುಚೇತ ರಘು, ಎಚ್.ಎಸ್.ವೆಂಕಟೇಶ್, ಎಚ್.ಎನ್.ಜಗದೀಶ್, ಕಿರಣ್, ಸಚಿನ್, ಸೋಮಶೇಖರ್ ರಕ್ತದಾನ ಮಾಡಿದರು.
ಡಾ.ಎಂ.ಆರ್. ಶಂಕರ್, ಜಿ.ಕೆ.ಲಲಿತ್ಕುಮಾರ್, ಡಿ.ಎಸ್. ಹರೀಶ್ ರಘು, ಡಾ.ಸುಧೀರ್ ಬೆಂಗಳೂರು, ಡಾ.ಎಂ.ಕೆ. ನಾಗೇಶ್ ಇತರರು ಇದ್ದರು.
ರಕ್ತದಾನ ಮಾಡಿದವರಿಗೆ ಬಿಸ್ಕತ್, ತಂಪು ಪಾನೀಯ ನೀಡಲಾಯಿತು.
ರೋಟರಿ ಮಿಡ್ಟೌನ್ ವೃತ್ತಿಪರ ಸೇವಾ ವಿಭಾಗದ ಛೇರ್ಮನ್ ಡಾ.ಡಿ.ಎಸ್. ವಿಜಯಕುಮಾರ್ ಮೇಲ್ವಿಚಾರಕರಾಗಿದ್ದರು. ಶಿಬಿರದಲ್ಲಿ 82 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.