ಲೋಕಾಯುಕ್ತ ಡಿಐಜಿ ರಾಣೆ ಭೇಟಿ
ಹಾಸನ: ನಗರದ ಲೋಕಾಯುಕ್ತ ಎಸ್ಪಿ ಕಚೇರಿಗೆ ಗುರುವಾರ ಲೋಕಾಯುಕ್ತ ಉಪ ಪೊಲೀಸ್ ಮಹಾ ನಿರೀಕ್ಷಕ (ಡಿಐಜಿ) ಪಾಂಡುರಂಗ ರಾಣೆ ಭೇಟಿ ನೀಡಿ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಡಿಐಜಿ ರಾಣೆ ಅವರು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್, ಲೋಕಾಯುಕ್ತ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ಶಿವಬಸಪ್ಪ, ಇನ್ಸ್ಪೆಕ್ಟರ್ ಶಾಂತಿನಾಥ್ ಹಾಗೂ ನರಸಿಂಹಮೂರ್ತಿ ಇದ್ದರು.
ಆರೋಗ್ಯ ಉಚಿತ ತಪಾಸಣೆ
ಸಕಲೇಶಪುರ: ಉತ್ತಮ ಜೀವನ ಸಾಗಿಸಲು ಆರೋಗ್ಯ ಮುಖ್ಯ. ಆರೋಗ್ಯದಿಂದ ಸದಾ ಕ್ರಿಯಾಶೀಲರಾಗುತ್ತೀರಾ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಶರಣ ಸಂಸ್ಕೃತಿ ಅಂಗವಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಔಷಧಿ ದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದ ಶರಣರು, ಉತ್ತಮ ಆರೋಗ್ಯ ರಕ್ಷಣೆ ಶಾರೀರಿಕ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀಮಠವು ಉಚಿತ ಆರೋಗ್ಯ ತಪಾಸಣೆ ಔಷಧಿ ದಾಸೋಹ ಕಾರ್ಯಕ್ರಮ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ಆರೋಗ್ಯ ತಪಾಸಣೆ ಔಷಧಿ ದಾಸೋಹ ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ, ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಶ್ರೀ ಮಠವು ಜಾತ್ಯತೀತ ಮಠ. ಇದು ಜಾತಿಧರ್ಮಗಳ ಕೇಂದ್ರವಲ್ಲ. ಎಲ್ಲಾ ಧರ್ಮಗಳ ಸಂದೇಶ ಎಲ್ಲರನ್ನು ಪ್ರೀತಿಸು ಎಂದು ಹೇಳುತ್ತಾರೆ. ಅದರಂತೆ ಶ್ರೀಮಠವು ಸಹ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುತ್ತಿದೆ ಎಂದು ಹೇಳಿದರು.
ಇಂದಿನಿಂದ ಬಾಬಾ ಉರುಸ್
ಜಾವಗಲ್: ಇಲ್ಲಿನ ದರ್ಗಾದಲ್ಲಿ ಬಾಬಾ ರವರ 4 ನೇ ವರ್ಷದ ಉರುಸ್ನ್ನು ಅ.11 ರಿಂದ 3 ರವರೆಗೆ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾವಗಲ್ ಠಾಣೆಯಲ್ಲಿ ನೂತನ ಠಾಣಾಧಿಕಾರಿ ನವೀನ್ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ ವೆಂದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂಘಟಕರು ಗಮನ ಹರಿಸಬೇಕು. ಹೆಚ್ಚಿನ ಸ್ವಯಂ ಸೇವಕರನ್ನು ಆಯೋಜಿಸುವಂತೆ ಟ್ರಸ್ಟ್ನವರಿಗೆ ಸೂಚಿಸಿದರು. ತಾಪಂ ಮಾಜಿ ಸದಸ್ಯ ಜೆ.ಕೆ ಸಿದ್ದೇಗೌಡ, ಲಕ್ಷ್ಮೀನಾರಾಯಣ, ಜೆ.ಕೆ. ಚಿಕ್ಕಯ್ಯ ರಾಜು, ಅಬ್ಬಾಸಾಹಾಜಿ ಮಾತನಾಡಿದರು. ಮಹಮದ್ ಶಕೀಲ್, ರಫೀಕ್, ಮಹಮದ್ ಅಹಮದ್, ಕಲಿಂ, ಹನೀಫ್, ಪ್ರಭಾಕರ, ಮಹಾಲಿಂಗಪ್ಪ, ಶಾಂತಕುಮಾರ್ ಇದ್ದರು.