ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಎಂ ಭೇಟಿ: ನಿರೀಕ್ಷೆಗಳೆಲ್ಲ ತಲೆಕೆಳಗು!

Rashmi Kasaragodu
Updated On : 10 Oct 2013, 11:19 am

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿಯಿಂದ ಜಿಲ್ಲೆ ಅಭಿವೃದ್ಧಿಗೆ ಪೂರಕವಾಗಿ ಹೆಚ್ಚೆಚ್ಚು ರ್ಹ ಬಿಡುಗಡೆ ಮಾಡುವ ಘೋಷಣೆ ಆಗುತ್ತದೆ.  ಜಿಲ್ಲೆಯಲ್ಲಿ ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಯೋಜನೆಗಳಿಗೆ ಮಿಂಚಿನ ಸಂಚಲನ ಮತ್ತು ಚಾಲನೆ ದೊರೆಯುತ್ತದೆ ಎಂಬೆಲ್ಲಾ ನಿರೀಕ್ಷೆ ಹೊಂದಲಾಗಿತ್ತು. ಆದರೆ ಅದು ನಿಜವಾಗಲಿಲ್ಲ...
ಮುಖ್ಯಮಂತ್ರಿಗಳು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯಾದ್ಯಂತ ತೇವಾಂಶದ ಕೊರತೆಯಿಂದ ನಾಶವಾಗಿರುವ ತೆಂಗಿನ ಬೆಳೆಗೆ ಪರಿಹಾರ ನೀಡಲು 585 ಕೋಟಿ ರು. ಪರಿಹಾರ ನೀಡುವ ಬಗ್ಗೆ ಮತ್ತು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಆದ ನಷ್ಟಕ್ಕೆ ಪರಿಹಾರ ನೀಡಲು ಕೇಂದ್ರಕ್ಕೆ 2724 ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಒತ್ತಡ ಹೇರಲಾಗುವುದು.
ಹಾಗೂ ಅಂಗಮಾರಿ ರೋಗದಿಂದ ಆಲೂ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಬಗ್ಗೆ ಮತ್ತು ಜಿಲ್ಲೆಗೆ ಪ್ರತ್ಯೇಕ ಪ್ಯಾಕೇಜಜ್ನೀಡುವ ಬಗ್ಗೆ ಬೆಂಗಳೂರಿನಲ್ಲಿ ಜಿಲ್ಲೆಯ ಶಾಸಕರ ಸಭೆಯನ್ನು ಬೆಂಗಳೂರಿನಲ್ಲಿ  ಕರೆಯಲಾಗುವುದು ಎಂದು ಹೇಳಿದ್ದನ್ನು ಬಿಟ್ಟರೇ ಈಗ ಜಿಲ್ಲಾದ್ಯಂತ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮತ್ತು ತೀರ ಹದಗೆಟ್ಟಿರುವ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ನಾನಾ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ತಕ್ಷಣದಿಂದ ಹಣ ಬಿಡುಗಡೆ ಮಾಡುವ ಭರವಸೆ ನೀಡಲಿಲ್ಲ.
ಪರಿಹಾರ ನೀಡಲು ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸರಿ. ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರದ ಹಣವನ್ನು ನೀಡುವ ಬಗ್ಗೆ ಮುಖ್ಯಮಂತ್ರಿ ಚಕಾರ ಎತ್ತದೇ ಹೋದದ್ದು ಏಕೆ. ಈಗಾದರೇ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನವನ್ನು ಟಾರ್ಗೆಟ್ ಎಂದು ಹೇಳಿದರೇ ಹೇಗೆ. ಜಿಲ್ಲೆಯ ಜನತೆ ಆಳುವವರಿಂದ ತಮಗೆ ಬದುಕು ಕಟ್ಟಿ ಕೊಡುವ ನಿಟ್ಟಿನಲ್ಲಿ ನೀಡುವ ಕಾರ್ಯಕ್ರಮಗಳು ಏನು  ಎಂಬುದರ ಆಧಾರ ಮೇಲೆ ತಮ್ಮ ನಿಲುವನ್ನು ತಳೆದು ಮತ ಚಲಾಯಿಸುತ್ತಾರೆ ಹೊರತು ಬರೀ ಮಾತಿಗಲ್ಲ ಎಂದು ರೈತ ಸಂಘದ ಮುಖಂಡ ಕಣಗಾಲು ಮೂರ್ತಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡರು, ಕೇವಲ ಅಧಿಕಾರ ವರ್ಗಾವಣೆ, ಕಾಮಗಾರಿ ಗುತ್ತಿಗೆ ಬಗೆಗಷ್ಟೇ ತಮ್ಮ ಚಿತ್ತ ಹರಿಸಿದರೇ ಸಾಲದು. ವಿರೋಧಿಗಳಿಗೆ ವಿನಾಕಾರಣ ತೊಂದರೆ ನೀಡುವುದು. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣರನ್ನು ಟೀಕೆ ಮಾಡುತ್ತಾ ದ್ವೇಷ ರಾಜಕಾರಣ ಬೀಜವನ್ನು ಬಿತ್ತಿನ ಬೆಳೆಯುಲು ಕಾಲಹರಣ ಮಾಡಿದರೇ ಸಾಲದು.
ಸಿಎಂ ಯಾವ ಯೋಜನೆಗೆ ಹಣ ನೀಡಬೇಕಿತ್ತು: ಹಾಸನ ವಿಮಾನ ನಿಲ್ದಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಅಗತ್ಯ ಭೂಸ್ವಾಧೀನ ಪ್ರಕ್ರಿಯೆ 5 ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಈ ಬಗ್ಗೆ ಸರ್ಕಾರದ ಕ್ರಮ ಏನು ಎಂದು ಸಿಎಂ ಪ್ರಕಟಿಸಬೇಕಿತ್ತು.
ಹಾಸನ ನಗರದ ಚನ್ನಪಟ್ಟಣ ಬಸ್ ನಿಲ್ದಾಣದ ಬಳಿ ರೈಲ್ವೆ ಮೇಲ್ಸುತುವೆ ನಿರ್ಮಾಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 50- 50 ಸಹಭಾಗಿತ್ವದಲ್ಲಿ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರೇ ಹೊರತು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಸಿಎಂ ಹೇಳಲಿಲ್ಲ. ಹಾಸನ ನಗರದ ವಸತಿಹೀನರಾದ 3 ಸಾವಿರ ಕೂಲಿ ಕಾರ್ಮಿಕರಿಗೆ, ಆಟೋ, ಟ್ಯಾಕ್ಷಿ ಚಾಲಕರಿಗೆ ನಗರದಲ್ಲಿ 30- 40 ಅಳತೆ ನಿವೇಶನಗಳನ್ನು ನೀಡಲು ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಮೀನನ್ನು ಸ್ವಾಧೀನ ಮಾಡಿಕೊಂಡಿತ್ತು. ನಂತರ ಬಂದ  ಬಿಜೆಪಿ ಸರ್ಕಾರ ಯೋಜನೆಗೆ ಚಾಲನೆ ನೀಡಲಿಲ್ಲ. ಈ ಸರ್ಕಾರದ ಕ್ರಮ ಏನು ಎಂಬುದನ್ನು ತಿಳಿಸಲಿಲ್ಲ.
ಹಾಸನ ನಗರ, ಹೊಳೆನರಸೀಪುರ, ಅರಸೀಕೆರೆ, ಸಕಲೇಶಪುರ, ಚನ್ನರಾಯಪಟ್ಟಣ ಮತ್ತು ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ಇರುವ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ರಾಜೀವ್ ಅವಾಸ್ ಯೋಜನೆಯಡಿ ಕ್ರಮ ಕೈಗೊಳ್ಳಲು ಲೋಕಸಭೆ ಸದಸ್ಯರು ಹಲವು ಬಾರಿ ಪತ್ರ ಬರೆದಿದ್ದರೂ ಆ ಬಗ್ಗೆ ಚಕಾರ ಎತ್ತಲಿಲ್ಲ.
ಜಿಲ್ಲಾದ್ಯಂತ ಪ್ರಸಕ್ತ  ಮುಂಗಾರು ಹಂಗಾಮಿನಲ್ಲಿ 6 ಲಕ್ಷ ಚೀಲ ಅಂದ್ರೆ 30 ಸಾವಿರ ಟನ್ ಬಿತ್ತನೆ ಆಲೂಗಡ್ಡೆ ರೈತರು ದುಬಾರಿ ಬೆಲೆಗೆ ಖರೀದಿಸಿ ಬಿತ್ತನೆ ಮಾಡಿದರು. ಆದರೆ 21 ಸಾವಿರ ಹೆಕ್ಟೇರ್ನಲ್ಲಿ ಆಲೂಗಡ್ಡೆಗೆ ರೋಗ ತಗುಲಿ ಕೊಳೆತು ಹೋಯಿತು.  ಐದಾರು ವರ್ಷಗಳಿಂದ ಆಲೂಗಡ್ಡೆಗೆ ತಗಲುತ್ತಿರುವ ಅಂಗಮಾರಿ ರೋಗ ನಿಯಂತ್ರಣಕ್ಕೆ ನಿರೀಕ್ಷಿತ ಕ್ರಮ ಜರುಗಿಸಿಲ್ಲ. ಆಲೂಗಡ್ಡೆ ಸಂಶೋಧನೆ ಕೇಂದ್ರ ಸ್ಥಾಪಿಸಲು ಬೇಕಾದ 50 ಕೋಟಿ ರು.  ಬಿಡುಗಡೆ ಮಾಡುವ ಮಾತನಾಡಲಿಲ್ಲ.
ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಮೆಣಸು ಅತಿ ಮಳೆಯಿಂದ ನಾಶವಾಗಿದ್ದಕ್ಕೇ ಪರಿಹಾರ ಘೋಷಣೆ ಮಾಡಲಿಲ್ಲ.  ಚಿಕ್ಕನಾಯಕನಹಳ್ಳಿಯಿಂದ ಹಾಸನ ಮಾರ್ಗವಾಗಿ ತಿಪಟೂರು ಗಂಡಸಿ ದುದ್ದ ರಸ್ತೆ ಕಾಮಗಾರಿ ಚಾಲನೆ ನೀಡುವ ಬಗ್ಗೆ,  ಮಲೆನಾಡು ತಾಲೂಕಾದ ಸಕಲೇಶಪುರದಲ್ಲಿ 20 ಸೇತುವೆಗಳ ನಿರ್ಮಾಣಕ್ಕೆ 12 ಕೋಟಿ ರು. ವೆಚ್ಚದಲ್ಲಿ ಚಾಲನೆ ನೀಡಲಾಗಿತ್ತು. ಕೇವಲ 9 ನಿರ್ಮಿಸಲಾಗಿದೆ. ಮತ್ತೆ ಚಾಲನೆ ನೀಡುವ ಬಗ್ಗೆ ಸಿದ್ದರಾಮಯ್ಯ ಏನೂ ಹೇಳಲಿಲ್ಲ.
ಭಾರತೀಯ ವೈದ್ಯಕೀಯ ಪರಷತ್ತಿನ ನಿಯಮಗಳ ಪ್ರಕಾರ ಹಾಸನ ವೈದ್ಯಕೀಯ ಕಾಲೇಜಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಮೂರನೇ ಹಂತದ ಕಾಮಗಾರಿಗೆ  35 ಲಕ್ಷ ರು. ಬಿಡುಗಡೆ ಮಾಡಲು, ಹಾಸನ ಸರ್ಕಾರಿ ಆಸ್ಪತ್ರೆಯನ್ನು 350 ಹಾಸಿಗೆಯಿಂದ 750 ಹಾಸಿಗೆಗಳುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು 85 ಕೋಟಿ ರು. ಬಿಡುಗಡೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಣವನ್ನು ಮುಂದಿನ ಬಜೆಟ್ನಲ್ಲಾದರೂ ಒದಗಿಸುವ ಬಗ್ಗೆ ಯಾವುದೇ ಭರವಸೆ ಸಿಎಂ ನೀಡಲಿಲ್ಲ.
6.74 ಕೋಟಿ  ಅನುದಾನ:  ಕೃಷಿ ಕಾಲೇಜಿನ 1 ಮತ್ತು 2 ಹಂತದ ಕಾಮಗಾರಿಗಳನ್ನು  ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಸದೇ ಕಾಮಗಾರಿ ಸ್ಥಗಿತಗೊಳಿಸಿರುತ್ತಾರೆ. ಈ ಕಾಮಗಾರಿ ಪೂರ್ಣಗೊಳಿಸಲು ಬೇಕಾದ 6.74 ಕೋಟಿ ರು.ಅನುದಾನದ ಅಗತ್ಯವಿದೆ.  ಹಾಸನ ಪಶು ವೈದ್ಯಕೀಯ ಕಾಲೇಜಿಗೆ ಅಗತ್ಯ ಕಟ್ಟಡ ಮತ್ತಿತರ ಸೌಲಭ್ಯ ಕಲ್ಪಿಸಲು  29.50 ಕೋಟಿ ರು. ಬೇಕಾಗಿದೆ. ಈ ಹಣ ನೀಡಿ ಮೂಲ ಸೌಲಭ್ಯ ಕಲ್ಲಿಸಿಕೊಳ್ಳದಿದ್ದರೇ ಮುಂದಿನ ವರ್ಷದಿಂದ  ಕಾಲೇಜಿನ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು  ಪಶು ವೈದ್ಯಕೀಯ ಪರಿಷತ್ ಎಚ್ಚರಿಕೆ ನೀಡಿದೆ.
ಹಾಸ್ಟೆಲ್ಗಳಲ್ಲಿ ಸಂಖ್ಯಾಬಲ ಹೆಚ್ಚಿಸುವ ಬಗ್ಗೆ:  ಹಾಸನ ನಗರದಲ್ಲಿರುವ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್ಗಳಲ್ಲಿ ಸಂಖ್ಯಾಬಲವನ್ನು ಹೆಚ್ಚಿಸುವ ಬಗ್ಗೆ ಮತ್ತು ಹೊಸದಾಗಿ ವಸತಿಗಳನ್ನು ವಿದ್ಯಾರ್ಥಿಗಳ ಅನುಗುಣವಾಗಿ ನಿರ್ಮಿಸುವ ಬಗ್ಗೆ ಮತ್ತು ಹಾಸನ ನಗರಕ್ಕೆ ಹೇಮಾವತಿ ನದಿಯಿಂದ 3 ನೇ ಹಂತದ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಗೆ 409 ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.  ಹೊಳೆನರಸೀಪುರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ 6 ನೇ ಹಂತದ ಯೋಜನೆಗೆ ಬೇಕಾದ 30 ಕೋಟಿ ರು. ಬಗ್ಗೆ ಪ್ರಸ್ತಾಪಿಸಲಿಲ್ಲ.
ಅರಕಲಗೂಡು ಪಟ್ಟಣಕ್ಕೆ ಒಳ ಚರಂಡಿ ಯೋಜನೆ ಗೆ ಬೇಕಾದ 18 ಕೋಟಿ ರು. ಮತ್ತು ಆಲೂರು ಒಳ ಚರಂಡಿ ಯೋಜನೆಗೆ 15 ಕೋಟಿ ರು. ಬೇಕಾಗಿದೆ.  ಬೇಲೂರು ತಾಲೂಕಿನ  ಯಗಚಿ ಜಲಾಶಯದ ವ್ಯಾಪ್ತಿಗೆ ಬರುವ ಕಾಮಸಮುದ್ರ ಬ್ರಾಂಚ್ ಕಾಲುವೆಯಿಂದ ಸುಮಾರು 40 ಗ್ರಾಮಗಳ ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ ಆರಂಭಿಸುವ ಬಗ್ಗೆ ಏನು ಹೇಳಲಿಲ್ಲ.
ಕಾವೇರಿ ನೀರಾವರಿ ನಿಗಮಕ್ಕೆ 1462.43 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಗೊರೂರು ಹೇಮಾವತಿ ಯೋಜನೆಗೆ  323.13 ಕೋಟಿ ರು. ನೀಡಲಾಗಿದೆ. ಇದು ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೇ ತೀರ ಕಡಿಮೆ. ಮುಂದಿನ ದಿನಗಳಲ್ಲಿ ಹೆಚ್ಚಿಸುವ ಬಗ್ಗೆ ಮತ್ತು ಸಕಲೇಶಪುರ- ಆಲೂರು ತಾಲೂಕುಗಳಲ್ಲಿ 10 ವರ್ಷಗಳಿಂದ ನಡೆಯುತ್ತಿರುವ ಕಾಡಾನೆಗಳ ಉಪಟಳ ತಡೆ ಬಗ್ಗೆ ಸಿಎಂ ಅಭಯ ನೀಡಲಿಲ್ಲ.
ಭಾರತೀಯ ತಾಂತ್ರಿಕ ಸಂಸ್ಥೆ:  ಹಾಸನ ನಗರದ ಹೊರವಲಯದಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಸ್ಥಾಪಿಸಲು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ವಶಪಡಿಸಿಕೊಂಡ ಸಾವಿರ ಎಕರೆಯನ್ನು ಪ್ರಭಾವಿಗಳು ಪಡೆಯಲು ಅಧಿಕಾರಸ್ಥರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇದಕ್ಕೆ ಅಸ್ಪದ ನೀಡದಿರುವ ಬಗ್ಗೆ ಮತ್ತು ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಆನೇಕ ಸರ್ಕಾರಿ ಕಾಲೇಜುಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಅನುದಾನ ನೀಡುತ್ತದೆ ಎಂದು ಸಿಎಂ ಭರವಸೆ ನೀಡಬೇಕಿತ್ತು. ಇದ್ಯಾವುದರ ಬಗ್ಗೆಯೂ ಪ್ರಸ್ತಾಪಿಸಲಿಲ್ಲ.
ಮುಂದಿನ ದಿನಗಳಲ್ಲಾದರೂ ಮುಖ್ಯಮಂತ್ರಿಗಳು ಇತ್ತ ಗಮನಹರಿಸಬೇಕೆಂದು ಸ್ಥಳೀಯ ಕಾಂಗ್ರೆಸಿಗರು ಒತ್ತಡ ಹೇರಬೇಕು. ಹಾಗೇ ಬಿಡದೇ ಲೋಕಸಭೆ ಚುನಾವಣೆಯಲ್ಲಿ ಮುಂದಿನ ಟಾರ್ಗೆಟ್ ಹಾಸನ ಎಂದರೇ ಜನತೆ ಬ್ಯಾಲೆಟ್ ಮೂಲಕ ತಕ್ಕಪಾಠ ಕಲಿಸುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement