ಕೈಗೆಟುಕದ 'ಭಾಗ್ಯಲಕ್ಷ್ಮೀ' ಸವಲತ್ತು
ಅರಸೀಕೆರೆ: ತಾಲೂಕಿನ ಬಹುತೇಕ ಗ್ರಾಮದಲ್ಲಿ ಬಿಪಿಎಲ್ ಕಾರ್ಡ್ಗಳಲ್ಲಿ ತಾಯಿಯ ಹೆಸರು ಇಲ್ಲ ಎನ್ನುವ ಕಾರಣದಿಂದ ಭಾಗ್ಯಲಕ್ಷ್ಮೀ ಯೋಜನೆಯ ಸವಲತ್ತುಗಳಿಂದ ಅನೇಕ ಬಡ ಕುಟುಂಬಗಳು ವಂಚಿತವಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ತಾಪಂ ಅಧ್ಯಕ್ಷರನ್ನು ಸದಸ್ಯರು ಒತ್ತಾಯಿಸಿದ ಪ್ರಸಂಗ ನಡೆಯಿತು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಜೆಪಿ ಸದಸ್ಯ ದಿನೇಶ್ ಹಾಗೂ ಬಾಣಾವರ ಜಯಣ್ಣ ಅವರು ಮಾತನಾಡಿ, ತಾಲೂಕಿನ ಅನೇಕ ಗ್ರಾಮದಲ್ಲಿ ಹೊಸದಾಗಿ ಮದುವೆ ಆಗಿ ಬಂದಿರುವ ಮಹಿಳೆಯರ ಹೆಸರು ಹಳೆಯ ಬಿಪಿಎಲ್ ಕಾರ್ಡ್ಗಳಲ್ಲಿ ಇಲ್ಲದಿರುವ ಕಾರಣ ಅಂತಹ ಮಹಿಳೆಯರಿಗೆ ಹೆಣ್ಣು ಮಕ್ಕಳಾದರೆ ಅವರಿಗೆ ಭಾಗ್ಯಲಕ್ಷ್ಮೀ ಯೋಜನೆಯ ಯಾವುದೇ ಸವಲತ್ತು ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವ ಕಾರಣ ತಾಲೂಕಿನ ಅನೇಕ ಮಹಿಳೆಯರು ಇದರಿಂದ ವಂಚಿತರಾಗಿದ್ದಾರೆ ಎಂದು ದೂರಿದರು. ಅಂತಹ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಬೇಕೆಂದು ಅವರು ಆಗ್ರಹಿಸಿದರು.
ಮಹಿಳೆ ಹೆಸರು ಕಡ್ಡಾಯ: ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸತ್ಯನಾರಾಯಣ ಸರ್ಕಾರದ ಆದೇಶದಂತೆ ಬಿಪಿಎಲ್ ಕಾರ್ಡ್ಗಳಲ್ಲಿ ಮಹಿಳೆಯ ಹೆಸರು ಕಡ್ಡಾಯ ಎಂಬುದನ್ನು ಪಾಲಿಸಲಾಗುತ್ತಿದೆ. ಕಾರ್ಡ್ಗಳಲ್ಲಿ ಹೆಸರು ಇಲ್ಲದಿದ್ದರೆ ಈ ಬಗ್ಗೆ ಸೂಕ್ತ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ ಹೆಸರು ನೊಂದಾಯಿಸಿ ಕೊಳ್ಳಬೇಕಾಗಿದೆ ಎಂದು ಸ್ಪಷ್ಟ ಪಡಿಸಿದರು.
ಆಹಾರ ಇಲಾಖೆ ಶಿರಸ್ತೇದಾರ್ ಗಂಗಾಧರಯ್ಯ ಮಾತನಾಡಿ ಅಂತಹ ಅರ್ಹ ಮಹಿಳೆಯರು ಅಧಿಕೃತ ದಾಖಲೆಗಳನ್ನು ನೀಡುವ ಮೂಲಕ ಹೊಸದಾಗಿ ಬಿಪಿಎಲ್ ಕಾರ್ಡ್ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಲು ಸಾಧ್ಯವಿದೆ ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ನೀಡಬೇಕಾಗಿದೆ ಎಂದು ತಿಳಿಸಿದರು.
ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಗ್ರಸ್ಥ ಸ್ಥಿತಿಯಲ್ಲಿವೆ ಎಂದು ಆರೋಪಿಸಿ ತಾಲೂಕು ಆರೋಗ್ಯಾಧಿಕಾರಿ ಡಾ.ದಿನೇಶ್ ಅವರ ವಿರುದ್ಧ ಸದಸ್ಯರು ಅಸಮಾದಾನ ವ್ಯಕ್ತಪಡಿಸಿದರು.
ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ: ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ ಕಾರಣ ಬಡಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗ್ರಾಮೀಣಾ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಸತಿ ಗೃಹಗಳಲ್ಲಿ ಕರ್ತವ್ಯ ನಿರತ ವೈದ್ಯರು ವಾಸ ಮಾಡದ ಕಾರಣ ಗ್ರಾಮದಲ್ಲಿ ಮಧ್ಯೆ ರಾತ್ರಿ ವೇಳೆ ಮಹಿಳೆಯರಿಗೆ ಹೆರಿಗೆ ನೋವು ಹಾಗೂ ಇನ್ನಿತರ ತುರ್ತು ಸೇವೆಯ ಅವಶ್ಯಕತೆ ಉಂಟಾದರೆ ಪರದಾಡುವಂತಹ ಪರಿಸ್ಥಿತಿ ಇದೆ. ಆದಕಾರಣ ಕಾಟಾಚಾರಕ್ಕಾಗಿ ಇರುವ ಇಂತಹ ಆಸ್ಪತ್ರೆಗಳಿಂದ ಏನು ಪ್ರಯೋಜನ. ಏನೂ ಇಲ್ಲದ ಅವುಗಳನ್ನು ಬಂದ್ ಮಾಡುವುದೇ ಸೂಕ್ತ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಪಕ್ಷೇತರ ಸದಸ್ಯ ಬಾಣಾವರ ರವಿಶಂಕರ್ ತಾಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಹೇಗಿದೆ ಎಂದರೆ ಎಲ್ಲಿನ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದೆ ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಚೀಟಿ ಬರೆದುಕೊಟ್ಟರೆ, ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆ ವೈದ್ಯರು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಹೋಗಿ ಎಂದು ಹಾಸನಕ್ಕೆ ಚೀಟಿ ಬರೆದುಕೊಡುವುದನ್ನು ಸಂಪ್ರದಾಯ ಮಾಡಿಕೊಂಡಿದ್ದಾರೆ. ಸಣ್ಣಪುಟ್ಟ ರೋಗಕ್ಕೂ ಬಡ ಮತ್ತು ಮಧ್ಯಮ ವರ್ಗದ ಜನರು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪಡಿತರದಾರರಿಗೆ ವಂಚನೆ: ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ತೂಕ ಹಾಗೂ ದರದಲ್ಲಿ ವ್ಯತ್ಯಾಸ ಮಾಡುವ ಮೂಲಕ ಪಡಿತದಾರರನ್ನು ವಂಚಿಸುತ್ತಿದ್ದಾರೆ. ಮತ್ತೆ ಕೆಲವರು ಪಡಿತರ ಪದಾರ್ಥಗಳನ್ನು ಪಡೆಯಲು ಆಧಾರ್ ಕಾರ್ಡ್ ನೀಡುವಂತೆ ತಾಕೀತು ಮಾಡುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಸದಸ್ಯ ಬಾಣಾವರ ಜಯಣ್ಣ ಸಭೆಯ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಶಿರಸ್ತೇದಾರ್ ಗಂಗಾಧರಯ್ಯ ಸರ್ಕಾರದ ನಿರ್ದೇಶನದಂತೆ ಪಡಿತದಾರರಿಂದ ಆಧಾರ್ ಕಾರ್ಡ್ನ್ನು ನ್ಯಾಯಬೆಲೆ ಅಂಗಡಿಯವರು ಕೇಳುತ್ತಿದ್ದರೂ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂಬ ನಿರ್ದೇಶನ ನೀಡಿದ ನಂತರ ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಹಕರಿಂದ ಆಧಾರ್ ಕಾರ್ಡ್ ಕೇಳಬಾರದೆಂದು ಮೌಖಿಕವಾಗಿ ಹೇಳಲಾಗಿದೆ. ಅದೇ ರೀತಿ ತಾಲೂಕಿನ ಯಾವುದಾದರೂ ನ್ಯಾಯಬೆಲೆ ಅಂಗಡಿಯಲ್ಲಿ ತೂಕ ಹಾಗೂ ದರದಲ್ಲಿ ಗ್ರಾಹಕರನ್ನ ವಂಚಿಸುತ್ತಿದ್ದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಂದೂರು ಕ್ಷೇತ್ರ ಸದಸ್ಯೆ ರತ್ನಮ್ಮ ಮಾತನಾಡಿ, ಸಿಂಗಟಗೆರೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ 20 ರು.ಗೆ ಸೀಮೆಎಣ್ಣೆ ಮಾರಾಟ ಮಾಡುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಈ ಸಂಬಂಧ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಶಿರಸ್ತೇದಾರ್ಗೆ ಸೂಚನೆ ನೀಡಿದರು.
ಸಂಕಷ್ಟದಲ್ಲಿ ತೆಂಗು ಬೆಳೆಗಾರರು: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತೆಂಗಿಗೆ ನಾನಾ ರೋಗಗಳು ಉಂಟಾಗಿ ತೆಂಗು ಬೆಳೆಗಾರರನ್ನ ಸಂಕಷ್ಟಕ್ಕೆ ನೂಕಿದೆ. ಈ ಕುರಿತು ತೋಟಗಾರಿಕೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಸದಸ್ಯ ಚಂದ್ರಶೇಖರ್, ಸುಧಾಕರ್, ಶಿವಕುಮಾರ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯ್ಕುಮಾರ್ ಅವರನ್ನು ಪ್ರಶ್ನಿಸಿದರು.
ಅದಕ್ಕೆ ಉತ್ತರ ನೀಡಿದ ಅಧಿಕಾರಿಗಳು ತಾಲೂಕಿನ ಎಲ್ಲೆಡೆಯಲ್ಲಿ ಈ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಸರ್ವೇ ಕಾರ್ಯ ನಡೆಯುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ ಒಟ್ಟು 767557 ತೆಂಗಿನ ಮರಗಳ ಸುಳಿ ಮುರಿದು ನಾಶವಾಗಿದ್ದು, ಈ ಸಂಬಂಧ ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಸಭೆಯಲ್ಲಿ ವಿವರಣೆ ನೀಡಿದರು.
ಇದರಿಂದ ಅಸಮಾಧಾನಗೊಂಡ ಅಧ್ಯಕ್ಷರು ಕೇವಲ ವರದಿ ಕಳುಹಿಸಿಕೊಟ್ಟರೆ ಸಾಲದು. ಕನಿಷ್ಠ ಒಂದು ತೆಂಗಿನ ಮರಕ್ಕೆ ಹತ್ತು ಸಾವಿರ ರುಪಾಯಿ ನಗದು ಪರಿಹಾರ ನೀಡುವಂತೆ ವರದಿಯಲ್ಲಿ ಶಿಫಾರಸು ಮಾಡಬೇಕೆಂದರು. ತಾಪಂ ಉಪಾಧ್ಯಕ್ಷೆ ವಸಂತ ಹೊನ್ನಪ್ಪ, ತಾಪಂ ಇಓ ಟಿ.ಎನ್.ಮೂರ್ತಿ ಇತರರು ಇದ್ದರು.