ಮಾದರಿ ತಾಲೂಕಾಗಿ ಚ.ರಾ.ಪಟ್ಟಣ: ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ
ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕನ್ನು ಮಾದರಿ ತಾಲೂಕು ಆಗಿಸಲು ಕೈಲಾದಷ್ಟು ಯತ್ನಿಸುವೆ. ಈ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಕೃಷಿಗೆ ಹೆಚ್ಚು ಗಮನಹರಿಸಿ ಕೆಲಸ ಮಾಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಇಲ್ಲಿಗೆ ಸಮೀಪದ ಅಗ್ರಹಾರ ಬೆಳಗುಲಿಯಲ್ಲಿ ನಡೆದ 3 ಲಕ್ಷ ರು.ವೆಚ್ಚದ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನವಿಲೆ ಏತ ನೀರಾವರಿಯಿಂದ 50 ಕ್ಯುಸೆಕ್ ನೀರು ಬಳಕೆ ಮಾಡಿಕೊಳ್ಳಬೇಕು. ಈಗ ಕೇವಲ 25 ಕ್ಯುಸೆಕ್ ನೀರು ಬಳಕೆಯಾಗುತ್ತಿದೆ. ನವಿಲೆ ಏತ ನೀರಾವರಿಯಿಂದ ಹೊನ್ನಮ್ಮನಕೆರೆ, ಹುಲ್ಲೇನಹಳ್ಳಿಕೆರೆ ಹಾಗೂ ಸಂತೆಶಿವರ, ರಾಂಪುರ ಚಿಕ್ಕೊನಹಳ್ಳಿ ಕೆರೆಗಳಿಗೆ ನೀರು ಹರಿಸಲು ಇಂಜಿನಿಯರ್ಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ರಾಜ್ಯ ಒಕ್ಕಲಿಗರ ಸಂಘದಿಂದ 4 ಕೋಟಿ ರು. ಹಾಸನದಲ್ಲಿ ಹಾಸ್ಟೆಲ್ ಕಟ್ಟಡಕ್ಕಾಗಿ ಬಿಡುಗಡೆಯಾಗಿದೆ. ತಾಲೂಕಿನಲ್ಲಿ 14 ಸಾವಿರ ಬಡವರಿಗೆ ಬಿಪಿಎಲ್ ಕಾರ್ಡ್ ನೀಡಿದೆ. ಡಿಸಿಸಿ ಬ್ಯಾಂಕ್ನಿಂದ ತಾಲೂಕಿಗೆ 106 ಕೋಟಿ ರು. ಸಾಲ ನೀಡಿದ್ದು, 60 ಕೋಟಿ ರೈತರ ಸಾಲ ಮನ್ನಾ ಆಗಿದೆ ಎಂದು ಹೇಳಿದರು.
ಹಾಸನದ ಡೈರಿಯಿಂದ ಸಂಘದ ಕಟ್ಟಡಕ್ಕೆ ಲಕ್ಷ ರು.ಅನುದಾನ ಕೊಡಿಸುವುದಾಗಿ ತಿಳಿಸಿದರು. ಬೆಳಗುಲಿ ಸಮುದಾಯ ಭವನಕ್ಕೆ 5 ಲಕ್ಷ ರು. ಭೈರವೇಶ್ವರ ದೇವಾಲಯಕ್ಕೆ 5 ಲಕ್ಷ ಕಟ್ಟಪ್ಪ ದೇವಾಲಯ ಸಮುದಾಯ ಭವನಕ್ಕೆ 2 ಲಕ್ಷ ರು. ಬೆಳಗುಲಿ ಗೇಟ್ಗೆ ಡಾಂಬರ್ ರಸ್ತೆ ಮಾಡಿಸುವ ಭರವಸೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜೇಗೌಡ, ಉಪನ್ಯಾಸಕ ಮೇಲಗಿರಿಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಜಯಲಿಂಗೇಗೌಡ, ಜೆಡಿಎಸ್ ಮುಖಂಡ ಸಂತೋಷ್, ಬಿ.ಎಂ. ವಿನಯ್, ಗ್ರಾಪಂ ಸದಸ್ಯ ನಾಗೇಶ್, ವಿಜಯಕುಮಾರ್, ಬಸವಲಿಂಗಪ್ಪ ಮೊದಲಾದವರು ಇದ್ದರು.