ಯುಪಿಎ ಸರ್ಕಾರ ಕಿತ್ತೊಗೆದರೆ ಭ್ರಷ್ಟಾಚಾರಕ್ಕೆ ಕಡಿವಾಣ: ಸಿ.ಟಿ.ರವಿ
ಕನ್ನಡಪ್ರಭ ವಾರ್ತೆ ಅರಸೀಕೆರೆ ಅ.11
ಕೋಟಿ ಕೋಟಿ ಹಗರಣಗಳಿಂದಾಗಿ ದೇಶದ ಅರ್ಥ ವ್ಯವಸ್ಥೆಯನ್ನು ಬುಡ ಮೇಲು ಮಾಡಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ದೇಶವನ್ನು ಕಾಪಾಡಬೇಕೆಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಪಟ್ಟಣದ ಶಾಂತವೀರಮ್ಮ ಪರಮೇಶ್ವರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೂತ್ ಮಟ್ಟದ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಕಳೆದ ಒಂಬತ್ತುವರೆ ವರ್ಷಗಳಲ್ಲಿ ಸಮಾರು 20 ಲಕ್ಷ ಕೋಟಿ ರು. ಗಳಷ್ಟು ಭ್ರಷ್ಟಾಚಾರ ನಡೆಸಿ ದೇಶದ ಮಾನವನ್ನು ಇಡೀ ಪ್ರಪಂಚದ ಎದುರು ಹರಾಜು ಹಾಕಿದೆ ಎಂದು ದೂರಿದರು.
2ಜಿ ಹಗರಣ, ಕಲ್ಲಿದ್ದಲು, ಕಾಮನ್ವೆಲ್ತ್, ಆದರ್ಶ ಹೌಸಿಂಗ್ ಹಗರಣ ಆಮದು ರಫ್ತು ಹಗರಣ ಹೀಗೆ ಮೂರು ಲೋಕಗಳಲ್ಲಿಯೂ ದೇಶದ ಸಂಪತ್ತನ್ನು ಕೊಳ್ಳೆಹೊಡೆಯುವ ಮೂಲಕ ವಿಶ್ವದಲ್ಲೆ ದಾಖಲೆ ನಿರ್ಮಿಸಿ ಈಗ ಗಿನ್ನಿಸ್ ದಾಖಲೆ ಸಾಧಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ನ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ಹೆಸರಿಗೆ ಮಾತ್ರದ ದುರ್ಬಲ ಪ್ರಧಾನಿ ಆಡಳಿತವನ್ನು ಕೊನೆಗಾಣಿಸಿ 21ನೇ ಶತಮಾನದಲ್ಲಿ ಪ್ರಗತಿಯತ್ತ ದೇಶವನ್ನು ಮುನ್ನಡೆಸಲು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಂಘಟಿತ ಹೋರಾಟಕ್ಕೆ ಸನ್ನದ್ದರಾಗಬೇಕೆಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ರೇಣುಕುಮಾರ್ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರಿಗೆ ಚುನಾವಣೆ ವೇಳೆಯಲ್ಲಿ ತೆಂಗು ಬೆಳೆಗಾರರ ಸಮಸ್ಯೆ, ನೀರಾವರಿ ಕಾಮಗಾರಿ ನೆನಪಿಗೆ ಬರುತ್ತವೆ. ನಂತರ ಜಿಲ್ಲೆಯ ಮತದಾರರನ್ನು ಭಗವಂತನೆ ಕಾಪಾಡಬೇಕು. ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಪಕ್ಷವನ್ನು ಬಲಗೊಳಿಸಲು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಲೋಕಸಭಾ ಚುನಾವಣಾ ಉಸ್ತುವಾರಿ ಪ್ರಾಣೇಶ್, ಮಾರುತಿ ದೇವರಾಜ್, ಶೋಭ ಶುಭಕರ್, ಎಪಿಎಂಸಿ ಸದಸ್ಯ ದುಮ್ಮೇನಹಳ್ಳಿ ಗಂಗಾಧರ್, ಪುರಸಭೆ ಮಾಜಿ ಸದಸ್ಯ ಎನ್. ಡಿ. ಪ್ರಸಾದ್ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಸದಸ್ಯ ಕೃಷ್ಣನಾಯ್ಕ, ತಾಪಂ ಸದಸ್ಯ ದೀನೇಶ್, ಜಯಣ್ಣ, ತಾಲೂಕು ಅಧ್ಯಕ್ಷ ರಮೇಶ್, ನಗರಾಧ್ಯಕ್ಷ ಹಿರಿಯಣ್ಣ, ಗಂಜಿಗೆರೆ ಬಸವರಾಜು ,ಸತೀಶ್, ಚಂದ್ರಶೇಖರ್, ವೈ.ಕೆ. ದೇವರಾಜ್, ಇತರರು ಇದ್ದರು.