ರು. 10 ಲಕ್ಷ ವೆಚ್ಚದ ಸೇವಾ ಕೇಂದ್ರ ಉದ್ಘಾಟನೆ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ದಿಡಗ ಗ್ರಾಮ ಪಂಚಾಯ್ತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ 10 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಭಾರತ್ ನಿರ್ಮಾಣ್ ರಾಜೀವಗಾಂಧೀ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಿತು.
ಕಟ್ಟಡ ಉದ್ಘಾಟಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, 10 ಎಕರೆ ಮೇಲಿರುವ ಕೆರೆಗಳ ಅಭಿವೃದ್ಧಿ ಹಾಗೂ ನೀರು ಹರಿಸುವ ಕಾಮಗಾರಿಗಾಗಿ 17.16 ಕೋಟಿ ರು. ಬಿಡುಗಡೆಯಾಗಿದೆ. ಒಂದು ಪಂಚಾಯ್ತಿ ವ್ಯಾಪ್ತಿ ಯಲ್ಲಿ ಕೇವಲ 20 ಆಶ್ರಯ ಮನೆಗಳನ್ನು ಮಾತ್ರ ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಗ್ರಾಮದ ಪ್ರತಿ ಕುಟುಂಬ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶವಿದೆ ಸುವರ್ಣ ಯೋಜನೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಂಕಲ್ಪ. ಇಡೀ ತಾಲೂಕಿಗೆ ನೀರು ಹರಿಸಲು ಕೇವಲ 150 ಕ್ಯುಸೆಕ್ ನೀರು ಸಾಕು ಇಂತಹ ಯೋಜನೆಗಳನ್ನು ಕೈಗೊಳ್ಳಲು ತಾವು ಮುಂದಾಗುವುದಾಗಿ ತಿಳಿಸಿದರು. ಅನ್ನಭಾಗ್ಯ, ಕ್ಷೀರಭಾಗ್ಯದ ಜೊತೆಗೆ ರಸ್ತೆಭಾಗ್ಯಕ್ಕೂ ಹೆಚ್ಚಿನ ಆದ್ಯತೆ ಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ನುಡಿದರು. ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ ಮಾತನಾಡಿ, ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಒಗ್ಗೂಡಿ ಕಾರ್ಯ ನಿರ್ವಹಿಸಿದರೆ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಯಾವುದೇ ತೊಂದರೆ ಉಂಟಾಗದು ಎಂದರು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ತಮ್ಮಣ್ಣಗೌಡ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸಿ ಫಲಾನುಭವಿಗಳಿಗೆ ತಲುಪಿಸಿದರೆ ಗ್ರಾಮರಾಜ್ಯದ ಕನಸು ನನಸಾಗುವುದು ಖಚಿತ ಎಂದು ಹೇಳಿದರು. ಜಿನ್ನೇನಹಳ್ಳಿ ಗ್ರಾಪಂ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ರಾಮ, ಕೃಷ್ಣ, ತಾಪಂ ಸದಸ್ಯ ಮಂಜೇಗೌಡ ಉರುಫ್ ತಮ್ಮಯ್ಯ, ಗ್ರಾಪಂ ಉಪಾಧ್ಯಕ್ಷೆ ದಾಕ್ಷಾಯಿಣಿ ಜಯರಾಮೇಗೌಡ, ಜಗದೀಶ್, ಕಿರಿಯ ಎಂಜಿನಿಯರ್ ಮಂಜುನಾಥ್, ಗ್ರಾಪಂ ಸದಸ್ಯರು ಇದ್ದರು. ಕಾರ್ಯದರ್ಶಿ ಡಿ.ಎ. ಶ್ರೀನಿವಾಸಮೂರ್ತಿ ನಿರೂಪಿಸಿದರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ಎಸ್.ಸುರೇಶ್ ಸ್ವಾಗತಿಸಿದರು.