ಸಿದ್ದರಾಮ ಚರಿತ್ರೆ ತಿರುಚಿ ಮುದ್ರಣ: ಜಿಲ್ಲಾ ವಚನ ಸಾಹಿತ್ಯ ಪರಿಷತ್ ಖಂಡನೆ
ಹಾಸನ: ರಾಘವಾಂಕನ ಸಿದ್ದರಾಮ ಚರಿತ್ರೆಯನ್ನು ತಿರುಚಿ ಮರು ಮುದ್ರಣ ಮಾಡಿದ್ದು, ಅದರಲ್ಲಿ ಬಸವಣ್ಣನವರ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರ ಹಳ್ಳಿ ಮಂಜೇಗೌಡ ತಿಳಿಸಿದ್ದಾರೆ.
ಉಜ್ಜಯಿನಿ ಬೆಲ್ಲನಾಳ ಮಠದವರು ಸಿದ್ದರಾಮ ಚರಿತ್ರೆಯನ್ನು ತಮಗೆ ಬೇಕಾದಂತೆ ತಿರುಚಿ ಮರುಮುದ್ರಣ ಮಾಡಿದ್ದು ಕಾಯಕಯೋಗಿ ಬಸವಣ್ಣನವರನ್ನು ಕಳ್ಳ,ಸುಳ್ಳ, ದುರಾಚಾರಿ ಎಂಬಿತ್ಯಾದಿ ಪದಗಳಿಂದ ಅವಹೇಳನ ಮಾಡಲಾಗಿದೆ. ಜಾತ್ಯತೀತ ಮತ್ತು ಆದರ್ಶ ಪುರುಷ ಬಸವಣ್ಣನನ್ನು ಅವಹೇಳನಕಾರಿಯಾಗಿ ಬಿಂಬಿಸಿರುವುದು ಖಂಡನೀಯ ಎಂದಿದ್ದಾರೆ.
ಬಸವಣ್ಣ ಒಂದು ಸಮುದಾಯದ ಸ್ವತ್ತಾಗಿ ಉಳಿದಿಲ್ಲ. ಅವರು ವಿಶ್ವದ ಗುರು. ಅವರ ವಚನಗಳು ಸಮಾಜಕ್ಕೆ ದಿವ್ಯಶಕ್ತಿಯಾಗಿವೆ. ಎಲ್ಲ ಸಮಾಜದವರನ್ನು ಅನುಭವ ಮಂಟಪದ ಮೂಲಕ ಸಮಾನವಾಗಿ ಕಂಡಿದ್ದರು. ಅಂತಹ ಮೇರು ಪುರುಷನ ಬಗ್ಗೆ ಕುಬ್ಜ ಮನಸ್ಸಿನ ವ್ಯಕ್ತಿಗಳು ಅವಹೇಳನ ಮಾಡಿರುವುದು ದುರದೃಷ್ಟಕರ. ನೂರಾರು ವರ್ಷಗಳಿಂದ ಜನಮಾನಸದಲ್ಲಿ ನೆಲೆಯೂರಿರುವ ಬಸವಣ್ಣನವರ ತ್ಯಾಗ, ಪರಿಶ್ರಮ ಮತ್ತವರ ಹೋರಾಟದ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲದ ಅಜ್ಞಾನಿಗಳು ಮಾತ್ರ ಅವರ ಬಗ್ಗೆ ಅಪಪ್ರಚಾರ ಮಾಡಬಲ್ಲರು ಅಷ್ಟೆ ಎಂದಿದ್ದಾರೆ.
ಪ್ರಸ್ತುತ ಸಮಾಜ ಅನ್ಯಾಯ, ಅಕ್ರಮ, ದುರಾಚಾರಗಳ ಹಾದಿಯಲ್ಲಿ ನಡೆಯುತ್ತಿದ್ದು ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯ ಬಲ್ಲ ಶಕ್ತಿ ಇರುವ ಮಹಾಪುರುಷರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿರುವ ಈ ಕೃತಿಯ ಲೇಖಕರು ಕ್ಷಮೆಯಾಚಿಸ ಬೇಕು. ಹಾಗೂ ಸರ್ಕಾರ ಕೃತಿಯನ್ನು ಮುಟ್ಟು ಗೋಲು ಹಾಕಿಕೊಳ್ಳಬೇಕು. ಯಾರೇ ದುರುದ್ದೇಶಪೂರ್ವಕವಾಗಿ ಇಂಥ ಕೃತಿಗಳನ್ನು ಪ್ರಕಟಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂತಲೂ ಆಗ್ರಹಿಸಿದ್ದಾರೆ.