ಹಲ್ಮಿಡಿ ಪ್ರತಿಕೃತಿ: ಅನುದಾನಕ್ಕೆ ಸಿಎಂಗೆ ಮನವಿ
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಮಾದರಿಯನ್ನು ಸ್ಥಾಪಿಸಲು ಮುಖ್ಯಮಂತ್ರಿಗಳ ನಿಧಿಯಿಂದ ಅನುದಾನ ನೀಡುವಂತೆ ಕೋರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜನಾರ್ದನ್ ಮನವಿ ಸಲ್ಲಿಸಿದ್ದಾರೆ. ಹಾಸನಾಂಬ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಜನತಾ ದರ್ಶನ ವೇಳೆ ಸಿಎಂ ಅವರನ್ನು ಭೇಟಿ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಜನಾರ್ದನ್, ಶಾಂತವೇರಿ ಗೋಪಾಲಗೌಡರ ಜೀವನ ಕುರಿತ ಪುಸ್ತಕವನ್ನು ಸಿದ್ದರಾಮಯ್ಯನವರಿಗೆ ನೀಡಿದರು. ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಹಲ್ಮಿಡಿಯಲ್ಲಿರುವ ಕನ್ನಡದ ಪ್ರಥಮ ಶಿಲಾ ಶಾಸನದ ಪ್ರತಿಕೃತಿಯನ್ನು ಪ್ರತಿಷ್ಠಾಪಿಸುವ ಯೋಜನೆಗಾಗಿ 10 ಲಕ್ಷ ರು ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದರು.