ಚರಂಡಿಗೆ ಬಿದ್ದ ಹಸು ಸಾರ್ವಜನಿಕರಿಂದ ರಕ್ಷಣೆ
ಕ.ಪ್ರ.ವಾರ್ತೆ ಸಕಲೇಶಪುರ ಅ.12
ಚರಂಡಿಗೆ ಬಿದ್ದು ಏಳಲಾಗದ ಕರುಣಾಜನಕ ಸ್ಥಿತಿಯಲ್ಲಿದ್ದ ಹಸುವೊಂದನ್ನು ಸಾರ್ವಜನಿಕರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಆಸ್ಪತ್ರೆಯ ಶವಾಗಾರದ ಹಿಂಬದಿಯಲ್ಲಿ ನಿರ್ಮಿಸಲಾಗಿರುವ ಬೃಹತ್ ಚರಂಡಿ, ಕಾಣದಂತೆ ಹಸಿರುಹುಲ್ಲು ಬೆಳೆದಿದ್ದು, ಹುಲ್ಲುಮೇಯಲು ಹೋಗಿದ್ದ ಹಸು ಕಳೆದ ಎರಡು ದಿನಗಳ ಹಿಂದೆ ಕಾಲು ಜಾರಿ ತಲೆ ಕೆಳಗಾಗಿ ಬಿದ್ದಿರುವುದನ್ನು ಆಸ್ಪತ್ರೆ ವಿದ್ಯುತ್
ದುರಸ್ತಿಗಾಗಿ ಆಗಮಿಸಿದ್ದ ಚೆಸ್ಕಾಂ ಇಲಾಖೆ ನೌಕರ ಅರುಣ್ ಗಮನಿಸಿದ್ದಾರೆ.
ನಂತರ ತಮ್ಮ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ನಡೆಸಿ ಕೊನೆಗೂ ಚರಂಡಿಯ ಒಂದು ಭಾಗವನ್ನು ಅಗೆದು ಹಸುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಬಗ್ಗೆ ಚೆಸ್ಕಾಂ ಸಿಬ್ಬಂದಿ ಅರುಣ್ ಮಾತನಾಡಿ, ಎರಡು ದಿನಗಳ ಹಿಂದೆಯೇ ಚರಂಡಿಗೆ ಬಿದ್ದಿರುವ ಹಸುವನ್ನು ಯಾರು ಗಮನಿಸದ ಕಾರಣ ನಿತ್ರಾಣಗೊಂಡಿದೆ ಎಂದು ಹೇಳಿದ್ದಾರೆ.