ನೂತನ ಬಸ್ ಮಾರ್ಗಕ್ಕೆ ಚಾಲನೆ
ಅರಕಲಗೂಡು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಮನಾಥಪುರ ಘಟಕದಿಂದ ಕೊಣನೂರು, ಬಾಣವಾರ, ಮರಿಯಾನಗರ, ಸೋಮವಾರಪೇಟೆ ಮಾರ್ಗ ಬೆಂಗಳೂರಿಗೆ ನೂತನ ಬಸ್ ಸಂಚಾರಕ್ಕೆ ಘಟಕ ವ್ಯವಸ್ಥಾಪಕ ಎಚ್.ಎನ್. ರಘು ಚಾಲನೆ ನೀಡಿದರು. ರಾಮನಾಥಪುರದಿಂದ ಬೆಂಗಳೂರಿಗೆ ತೆರಳಿ ಮತ್ತೆ ರಾಮನಾಥಪುರಕ್ಕೆ ಬರಲು ನಮ್ಮ ಘಟಕದಿಂದ ಪ್ರತಿ ದಿನ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು. ರಾಮನಾಥಪುರ ಘಟಕದಲ್ಲಿ ನೂತನ ಬಸ್ಸಿಗೆ ಪೂಜೆ ಸಲ್ಲಿಸಿದ ನಂತರ ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ರಾಜ್ಯಧ್ಯಕ್ಷ ಶಿವಲಿಂಗಶಾಸ್ತ್ರಿ ಮಾತನಾಡಿ ಗ್ರಾಮಿಣ ಪ್ರದೇಶಗಳ ಮುಖಾಂತರ ಬೆಂಗಳೂರಿಗೆ ಬಸ್ ಸಂಪರ್ಕ ಕಲ್ಪಿಸಿರುವುದು ಈ ಭಾಗದ ಸಾರ್ವಜನಿಕರಿಗೆ ಸಹಾಯವಾಗಲಿದ್ದು ಪ್ರಯಾಣಿಕರು ಸಹಕಾರ ನೀಡಿ ಇದರ ಉಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ವ್ಯವಸಾಯೋತ್ಪನ್ನ ಸಂಘಕ್ಕೆ ಆಯ್ಕೆ
ಆಲೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಕ್ಕಮ್ಮ 222, ನಂಜುಂಡಪ್ಪ 317, ಅಜಿತ್ 294, ತೌಫಿಕ್ 298, ರತ್ನ 249, ಲೋಲಾಕ್ಷಿ 284 ಮತಗಳನ್ನು ಪಡೆದು ಜಯಶೀಲರಾದರು. ಆರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 603 ಮತದಾರರು ಮತ ಚಲಾಯಿಸಿದರು. ಎ.ಎಸ್.ಗೋಪಾಲಕೃಷ್ಣ 264, ದೇವರಾಜ್ 198, ಪಾರ್ವತಮ್ಮ 244, ಪುಟ್ಟರಾಜೇಗೌಡ 207, ಮಲ್ಲಪ್ಪ 136, ಶಂಕರಾಚಾರ್ 23, ಎಚ್.ಶಿವರಾಮೇಗೌಡ 249, ಎ.ಎಸ್.ಸೋಮಶೇಖರ್ 275 ಮತಗಳನ್ನು ಪಡೆದು ಪರಾಜಿತರಾದರು.