ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೆಲೆ ಏರಿಕೆ ನಡುವೆ ಆಯುಧ ಪೂಜೆಗೆ ಸಂಭ್ರಮದ ಸಿದ್ಧತೆ

Rashmi Kasaragodu
Updated On : 12 Oct 2013, 10:04 am

ಹಾಸನ: ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ನಾಡಹಬ್ಬ ದಸರ ಆಚರಣೆಗೆ ಜನತೆ ಉತ್ಸುಕರಾಗಿದ್ದು, ಮುನ್ನ ದಿನವಾದ ಆಯುಧ ಪೂಜೆಗೆ ಜಿಲ್ಲೆಯ ಜನತೆ ಸಕಲ ಸಿದ್ಧತೆಯನ್ನು ಶನಿವಾರ ನಡೆಸಿದರು.
ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಆಯುಧ ಪೂಜೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ತಲ್ಲೀನರಾಗಿ ಬೆಲೆಯನ್ನು ಲೆಕ್ಕಿಸದೇ ವಸ್ತುಗಳ ಖರೀದಿಯಲ್ಲಿ ಮುಗಿ ಬಿದ್ದಿದ್ದರು. ಎಲ್ಲಾ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದು, ಹೂವು, ಹಣ್ಣು, ಬಾಳೆಕಂದು, ಕುಂಬಳಕಾಯಿ ಬೆಲೆಗಳು ಗಗನಕ್ಕೇರಿದೆ. ಆದರೆ ಜನರು ಬೆಲೆಯ ಕಡೆ ಗಮನ ನೀಡದೆ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
ಆಯುಧ ಪೂಜೆಯ ವಸ್ತುಗಳ ಬೆಲೆ ಕಳೆದ ವರ್ಷಕ್ಕಿಂತ ಈ ಬಾರಿ ಇನ್ನೂ ದುಬಾರಿಯಾಗಿದ್ದರೂ ಜಿಲ್ಲೆಯ ಜನತೆ ಆ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ. ಬೆಳಗ್ಗೆ ಬೇಗ ಎದ್ದು, ವಾಹನಗಳನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬದ ಅಡುಗೆ ಮಾಡಿ ನೈವೇದ್ಯ ಇಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಬ್ಬದ ಸೊಗಡು ದಿನೇ ದಿನೇ ಕಡಿಮೆಯಾಗುತ್ತಿದೆ. ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ, ದುಡಿಮೆ ಹಾಗೂ ಸಂಪಾದನೆಯಲ್ಲಿ ಲೀನವಾಗಿ ಸಂಪ್ರದಾಯಗಳು, ಆಚಾರ-ವಿಚಾರಗಳಿಗೆ ಅಷ್ಟಾಗಿ ಪ್ರಾಮುಖ್ಯತೆ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಅಗತ್ಯ ವಸ್ತುಗಳ ಬೆಲೆಗಳು ಏಕಾಏಕಿ ಹೆಚ್ಚಾಗುತ್ತಿರುವುದರಿಂದ ಹಬ್ಬದ ಆಚರಣೆಯತ್ತ ಜನರ ಗಮನ ಕುಗ್ಗುತ್ತಿದೆ.
ಬೆಲೆ ಏರಿಕೆ: ಕಳೆದ ಬಾರಿ ಒಂದು ಕುಂಬಳಕಾಯಿ ಬೆಲೆ 40 ರಿಂದ 50 ರು. ಇದ್ದರೇ ಈ ಬಾರಿ 80 ರಿಂದ 100 ರು. ಗಳಿಗೆ ಏರಿಕೆಯಾಗಿದೆ. ಸೇವಂತಿಗೆ ಹೂವು ಒಂದು ಮಾರಿಗೆ ಕಳೆದ ಬಾರಿ 40 ರಿಂದ 65 ರು. ಗಳ ವರೆಗೂ ಇದ್ದದ್ದು, ಈ ಬಾರಿ 60 ರಿಂದ 80 ರು. ಗಳ ಬೆಲೆ ಕಂಡು ಬಂದಿದೆ.  ಎರಡು ಬಾಳೆ ಕಂಬಕ್ಕೆ ಕಳೆದ ಬಾರಿ 40 ರಿಂದ 75 ರು.ಗಳಿದ್ದು, ಈ ಬಾರಿ 80 ರಿಂದ 100 ರು.ಗೆ ಏರಿಕೆಯಾಗಿದೆ. ಸೇಬು ಅಷ್ಟೊಂದು ಬದಲಾವಣೆ ಕಾಣಲಿಲ್ಲ. ಒಂದು ಕೆಜಿಗೆ 100 ರು, ಬಾಳೆ ಹಣ್ಣು ಒಂದು ಡಜೆನ್ಗೆ 40 ರಿಂದ 60 ರು,  ಮಾವಿನ ಎಲೆ ಒಂದು ಕಟ್ಟಿಗೆ 5 ರು.ನಿಂದ 10 ರು. ಆಗಿದೆ. ಈ ರೀತಿಯ ಬೆಲೆ ಏರಿಕೆಯಾಗಿದ್ದರೂ ಆಯುಧ ಪೂಜಾ ಸಾಮಗ್ರಿಗಳ ಬೆಲೆ ಖರೀದಿ ಮಾತ್ರ ಕುಂದಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಹಳದಿ ಸೇವಂತಿಗೆ, ಬಣ್ಣದ ಸೇವಂತಿಗೆ, ಮಲ್ಲಿಗೆ ಹೂವು, ಕಾಕಡ ಹೂವು, ಕನಕಾಂಬರದ ಬೆಲೆ ಗಗನಕ್ಕೇರಿದೆ. ಮಾವಿನ ಸೊಪ್ಪ ಒಂದು ಕಟ್ಟಿಗೆ 10 ರು. ಆಗಿದೆ. ಸಾರ್ವಜನಿಕರು ವಿಧಿ ಇಲ್ಲದೆ ಅಗತ್ಯವಸ್ತುಗಳ ಖರೀದಿಯಲ್ಲಿ ತೊಡಗಿ ಸಿದ್ದತೆಯಲ್ಲಿದ್ದಾರೆ.
ಹಿಂದೆ ಹಣ್ಣುಗಳ ಬೆಲೆಯು ದುಬಾರಿಯಾಗಿದ್ದು ಕೊಳ್ಳುವವರ ಸಂಖ್ಯೆಯು ಕಡಿಮೆ ಇದ್ದರು. ಆಗ ತರಕಾರಿಯ ಬೆಲೆಗಳು ಕೊಂಚ ಕಡಿಮೆ ಇದ್ದವು. ಸೇಬು, ದ್ರಾಕ್ಷಿ,  ಕಿತ್ತಲೆ, ಸಪೋಟ, ಮೋಸಂಬಿ, ಕಿತ್ತಲೆ, ಕಲ್ಲಂಗಡಿ ಹಣ್ಣಿನ ದರಗಳು ಏರಿಕೆಯಾಗಿದೆ.  ಮಾರುಕಟ್ಟೆಯ ವಸ್ತುಗಳ ಬೆಲೆಯಲ್ಲಿ ಇಷ್ಟೆಲ್ಲಾ ಏರಿಕೆಯಾಗಿದ್ದರೂ ಜನರು ಬೆಲೆಯ ಕಡೆ ಲೆಕ್ಕಿಸದೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿ ನಾಡಹಬ್ಬ ದಸರ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement