ಭಾಷಾಂತರ ಅವಾಂತರ....ಕನ್ನಡ ಕೊಂದ ಅಧಿಕಾರಿ
ಹಾಸನ: ತಮ್ಮ ಜಿಲ್ಲೆಯ ಮಲೆನಾಡು ಭಾಗದ ಕಾಫಿ ಬೆಳೆಗಾರರನ್ನು ನೋಡಿ ಹಾಸನ ಜಿಲ್ಲೆ ಸಮಗ್ರ ಅಭಿವೃದ್ಧಿ ಹೊಂದಿದೆ ಎಂದು ಭಾವಿಸಲಾಗಿದೆ. ಇದು ಶುದ್ಧ ತಪ್ಪು. ಬೆಳೆಗಾರರು ಬೆಳೆಯಿಲ್ಲದೆ ತತ್ತರಿಸಿ ಹೋಗಿದ್ದಾರೆ. ಇದನ್ನು ಅರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಿಲ್ಲೆ ಸಮಗ್ರ ಅಭಿವೃದ್ಧಿಯತ್ತ ನೋಟ ಹರಿಸಬೇಕಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಯಾಖ್ಯಾನಿಸಿದರು. ಶನಿವಾರ ನ್ಯೂ ಮಿನರ್ವ ಮಿಲ್ ಕಾರ್ಖಾನೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಗೌಡರು, ಹಾಸನ ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದೆ. ಅದಕ್ಕಾಗಿ ಉದ್ಯೋಗ ನೀಡುವ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆ ಆಗಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹಣ್ಣು, ಹಾಲು ತರಕಾರಿ ಸಂಸ್ಕರಣಾ ಘಟಕ ಆರಂಭವಾಗಬೇಕಾಗಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ಅಭಿವೃದ್ಧಿಗೆ ಹಮ್ಮಿಕೊಳ್ಳುವ ಕಾರ್ಯಗಳಿಗೆ ತಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದರು.
ಭಾಷಾಂತರದ ಅವಾಂತರ: ಸಭೆಯಲ್ಲಿ ಭಾಷಾಂತರದ ಅವಾಂತರ ಘಟಿಸಿತು. ಕೇಂದ್ರ ಸಚಿವ ಡಾ. ಕೆ. ಸಾಂಬಾಶಿವ ರಾವ್ ಮಾಡಿದ ಇಂಗ್ಲಿಷ್ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ನಿಂತ ಅಧಿಕಾರಿಯೊಬ್ಬರು ಯದ್ದಾತದ್ವಾ ತಪ್ಪುಗಳನ್ನು ಮಾಡಲಾರಂಭಿಸಿದರು. ಸಚಿವರು ಕೋಟಿ ರು. ಅಂದ್ರೆ, ಕನ್ನಡ ಭಾಷಾಂತಕಾರರು ಲಕ್ಷ ಎನ್ನುತ್ತಿದ್ದರು. ಇದರಿಂದ ಬೇಸರಗೊಂಡ ಸಭಿಕರು, ಸಚಿವರು, ಇಂಗ್ಲಿಷ್ನಲ್ಲಿ ಮಾತನಾಡಿ, ಭಾಷಾಂತರಕಾರರು ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದರು. ಆಗ ಮಧ್ಯ ಪ್ರವೇಶಿಸಿದ ದೇವೇಗೌಡರು, ಕನ್ನಡಕ್ಕೆ ತರ್ಜುಮೆ ಮಾಡುತ್ತಿರುವುದು ಸರಿಯಿಲ್ಲ ಎಂದು ಜನತೆ ಹೇಳುತ್ತಿದ್ದಾರೆ. ಸಚಿವರು ಫಾರಿನ್ ಇಂಗ್ಲಿಷ್ ಮಾತನಾಡುತ್ತಿಲ್ಲ. ಸರಳ ಇಂಗ್ಲಿಷ್ ಮಾತನಾಡುತ್ತಿದ್ದಾರೆ. ನಮ್ಮ ಕಾರ್ಖಾನೆ ನೌಕರರು, ಐಟಿಐ ಮತ್ತಿತರ ಕೋರ್ಸ್ಗಳನ್ನು ಓದಿದವರಾಗಿದ್ದಾರೆ. ಹಾಗಾಗಿ ಸಚಿವರು ಇಂಗ್ಲಿಷ್ನಲ್ಲೆ ಮಾತನಾಡಿ, ತರ್ಜುಮೆ ಬೇಡ ಎಂದರು. ಆಗ ಸಚಿವರು ಇಂಗ್ಲಿಷ್ನಲ್ಲಿ ಭಾಷಣ ಮಾಡಿದರು. ಸಭೆಯಲ್ಲಿ ಕುವೆಂಪು ರಚಿಸಿದ ನಾಡಗೀತೆಯನ್ನು ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಕ್ಯಾಸೆಟ್ ಮೂಲಕ ಕೇಳಿಸಲಾಯಿತು.