ಮಾರುಕಟ್ಟೆ ಮೇಲಿನ ಪರಿಣಾಮ: ಉಪನ್ಯಾಸ
ಹಾಸನ: ತಾಲೂಕಿನ ಹಳ್ಳಿಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಮಾರುಕಟ್ಟೆಯಯಲ್ಲಿ ಬದಲಾಗುತ್ತಿರುವ ಪ್ರಸ್ತುತ ವಿದ್ಯಮಾನಗಳು ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಸಂಪತ್ಕುಮಾರ್ ಮಾತನಾಡಿ, ಪ್ರಸ್ತುತ ಜಾಗತಿಕ ಮಾರುಕಟ್ಟೆಯಿಂದ ನಮ್ಮ ಮೇಲಾಗುತ್ತಿರುವ ಪರಿಣಾಮಗಳನ್ನು ಅರಿತು ನಿವಾರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅತ್ಯಗತ್ಯ ಎಂದು ತಿಳಿಸಿದರು.
ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ವಿ.ಗಾಯತ್ರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಸ್ತುತ ಮಾರುಕಟ್ಟೆ ಪ್ರಕ್ರಿಯೆಯಲ್ಲಿ ಭಾಗಿಗಳಾಗಲು ಇರುವ ದೂರವಾಣಿ ಮಾರುಕಟ್ಟೆ. ಮೊಬೈಲಲ್ಮಾರುಕಟ್ಟೆ, ವಿದ್ಯುನ್ಮಾನ ಮಾರುಕಟ್ಟೆ ಮತ್ತು ಅಂತರ್ಜಾಲದ ಮೂಲಕ ಹೇಗೆ ಮಾರುಕಟ್ಟೆಯ ಸೌಲಭ್ಯವನ್ನು ಪಡೆದುಕೊಳ್ಳ ಬಹುದೆಂಬುದರ ಬಗ್ಗೆ ವಿವರಣೆ ನೀಡಿದರು. ಹಾಗೂ ಇಂತಹ ವಿಧಾನಗಳ ಮೂಲಕ ಗ್ರಾಮೀಣ ಭಾಗದ ಜನಸಾಮಾನ್ಯರೂ ಕೂಡ ಇದರ ಲಾಭವನ್ನು ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಎಚ್.ಟಿ.ರವಿಕುಮಾರ್ ಸ್ವಾಗತಿಸಿದರು. ಕೆ.ಶಿವರಾಜು ವಂದಿಸಿದರು. ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಇದ್ದರು.