ರಾಜಾರೋಷವಾಗಿಯೇ ಗುಟ್ಕಾ ಮಾರಾಟ
ಹೊಳೆನರಸೀಪುರ: ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಪದಾರ್ಥಗಳನ್ನು ನಿಷೇಧಿಸಿ, ಇವುಗಳನ್ನು ಮಾರಾಟ ಮಾಡದಂತೆ ನಿರ್ಬಂಧನೆ ವಿಧಿಸಿದ್ದರೂ, ಪಟ್ಟಣದ ಅಂಗಡಿ, ಕ್ಯಾಂಟೀನ್ಗಳಲ್ಲಿ ಮಾತ್ರ ಗುಟ್ಕಾ ಹಾಗೂ ಪಾನ್ಗಳನ್ನು ರಾಜಾರೋಷವಾಗಿಯೇ ಮಾರಾಟ ಮಾಡಲಾಗುತ್ತಿದೆ.
ಸರ್ಕಾರ ನಿಷೇಧವನ್ನು ಹೇರಿದ್ದರೂ ಅಂಗಡಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚೈನಿ ಖ್ಯನಿ, ಪಾನ್ ಪರಾಗ್, ಸೂಪರ್, ಮಧು ಮೊದಲಾದ ತಂಬಾಕು ಪದಾರ್ಥಗಳನ್ನು ರಾಜಾರೋಷವಾಗಿಯೇ ಮಾರಾಟ ಮಾಡಲಾಗುತ್ತಿದೆ.
ಮೊದಲು ಒಂದೇ ಪೊಟ್ಟಣದಲ್ಲಿ ಮಾರಾಟ ಮಾಡಲಾಗುತ್ತಿದ್ದ ಈ ವಸ್ತುಗಳನ್ನು, ಈಗ ಕಾನೂನಿನ ಕಣ್ಣಿಗೆ ಮಣ್ಣೆರಚಲು ಒಂದೇ ಪದಾರ್ಥದ ಬದಲಿಗೆ ಎರಡು ಪ್ಯಾಕೇಟುಗಳಲ್ಲಿ ಹೆಚ್ಚಿನ ಹಣಕ್ಕೆ ಒಂದರಲ್ಲಿ ಅಡಿಕೆ ಹಾಗೂ ಇನ್ನೊಂದು ಸಣ್ಣ ಪ್ಯಾಕೇಟಿನಲ್ಲಿ ತಂಬಾಕನ್ನು ಜೊತೆ ಜೊತೆಗೆ ಮಾರಾಟ ಮಾಡಲಾಗುತ್ತಿದೆ.
ಇದೆಲ್ಲಾ ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ಪೊಲೀಸರಿಗೆ ತಿಳಿಯದ ವಿಷಯವೇನಲ್ಲ. ಆದರೂ ಈ ಎಲ್ಲಾ ಇಲಾಖೆಗಳು ಕಣ್ಣುಮುಚ್ಚಿ ಕುಳಿತ ಕಾರಣದಿಂದಾಗಿ ಅಂಗಡಿ, ಕ್ಯಾಂಟೀನ್ಗಳಲ್ಲಿ ಗುಟ್ಕಾಗಳನ್ನು ಮುಂದೆಯೇ ನೇತು ಹಾಕಿ ಮಾರಾಟ ಮಾಡಲಾಗುತ್ತಿದೆ.
ರಾಜ್ಯಾದ್ಯಂತ ಗುಟ್ಕಾಗಳನ್ನು ನಿಷೇಧಿಸಿದ ಸಂದರ್ಭದಲ್ಲಿ ಬೇರೆ ಪಟ್ಟಣಗಳಲ್ಲಿ ಸಂಪೂರ್ಣವಾಗಿ ಮಾಯವಾಗಿದ್ದ ಗುಟ್ಕಾಗಳು, ಪಟ್ಟಣದಲ್ಲಿ ಮಾತ್ರ ಹೆಚ್ಚಿನ ಬೆಲೆಗೆ ಕದು ಮುಚ್ಚಿ ಮಾರಾಟವಾಗುತ್ತಿತ್ತು. ಈಗಂತೂ ಯಾರ ಭಯವೂ ಇಲ್ಲದೇ ರಾಜಾರೋಷವಾಗಿಯೇ ನಿಷೇಧಿತ ಗುಟ್ಕಾ ಹಾಗೂ ನಿಷೇಧಿತ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಗಮನ ನೀಡುವರೇ.