ವಿಜಯ ದಶಮಿಗೆ ಸಡಗರದ ಸಿದ್ಧತೆ
ಅರಸೀಕೆರೆ: ವಿಜಯ ದಶಮಿ ಅಂಗವಾಗಿ ಹಣ್ಣು ಹೂವು ಬೆಲೆ ಗಗನಕ್ಕೆ ಏರಿದ್ದರೆ ವಿಶೇಷವಾಗಿ ಬೂದುಗುಂಬಳ ಕಾಯಿ ಬೆಲೆ ದುಪ್ಪಟ್ಟು ಆಗಿದ್ದರೂ, ಹಬ್ಬಕ್ಕೆ ಅಗತ್ಯವಾದುದರಿಂದ ಅವನ್ನು ಖರೀದಿಸಲು ಜನ ಮುಗಿಬೀಳುತ್ತಿರುವ ದೃಶ್ಯ ಪಟ್ಟಣದಲ್ಲಿ ಎಲ್ಲೆಡೆ ಕಂಡುಬಂತು. ಆಯುಧ ಪೂಜೆಯಂದು ತಮ್ಮ ವಾಹನ, ಅಂಗಡಿ, ಕೊಳವೆ ಬಾವಿಗಳು ಸೇರಿದಂತೆ ಇತರಡೆ ಇವುಗಳನ್ನು ಪೂಜಿಸಿ ಬಾಗಿಲಿಗೆ ಒಡೆಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಬ್ಬದ ಮುನ್ನ ದಿನವಾದ ಶನಿವಾರ ರೈತರು, ಗ್ರಾಹಕರು ಕುಂಬಳಕಾಯಿಯನ್ನು 75 ರಿಂದ 150 ರು. ವರೆಗೆ ಬೆಲೆ ನೀಡಿ ಖರೀದಿಸುತಿದ್ದರು. ಸತತ ಬರಗಾಲ ಮಳೆಯ ಅಭಾವದ ನಡುವೆಯೂ ವಿಜಯದಶಮಿ ಆಚರಣೆಗೆ ಮುಂದಾಗಿರುವ ತಾಲೂಕಿನ ಜನತೆಗೆ ಬೆಲೆಯೇರಿಕೆಯ ಬಿಸಿ ಕೊಂಚ ಶಾಕ್ ನೀಡಿದೆ. ಮಾರುಕಟ್ಟೆಯಲ್ಲಿ ಹೂ, ಬಾಳೆಹಣ್ಣು, ಸೇಬು, ಬಾಳೆಕಂದು, ಮಾವಿನಸೊಪ್ಪು ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಪಟ್ಟಣದ ಗ್ರಂಥಾಲಯ ರಸ್ತೆಯಲ್ಲಿ ಜನ ಮುಗಿಬೀಳುತ್ತಿದ್ದರು.