ವಿಜಯದಶಮಿ ಅಂಗವಾಗಿ ಬೊಂಬೆಗಳ ಪ್ರದರ್ಶನ
ಅರಸೀಕೆರೆ: ಸಾಂಸ್ಕೃತಿಕ ಪರಂಪರೆ ಸಾರುವ ವಿಜಯದಶಮಿ ಆಚರಣೆಗೆ ಬೊಂಬೆಗಳ ಪ್ರತಿಷ್ಠಾಪನೆ ಮತ್ತಷ್ಟು ಮೆರಗು ನೀಡಿದ್ದು ಈ ಬೊಂಬೆಗಳು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸತೊಡಗಿದೆ. ಪಟ್ಟಣದ ಹೊರ ವಲಯದಲ್ಲಿರುವ ಜೆ.ಪಿ.ಫಾರ್ಮ್ ಹೌಸ್ನ ಲಲಿತ ಜಯಣ್ಣನವರ ನಿವಾಸದಲ್ಲಿ ಮನಮೋಹಕ ಬೊಂಬೆಗಳ ಸಾಲು-ಸಾಲು ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.
ಮಹಾಲಯ ಅಮಾವಾಸ್ಯೆಯಂದು ದೇವಿ ಕಳಸ ಪ್ರತಿಷ್ಠಾಪಿಸಿ 18 ಅಧ್ಯಾಯದ ದೇವಿ ಪಾರಾಯಣವನ್ನು 9 ದಿನಗಳ ಕಾಲ ನಡೆಸಲಾಗುತ್ತದೆ. ನಂತರ ವಿಜಯದಶಮಿಯಂದು ವಿಶೇಷ ಪೂಜೆ ಸಲ್ಲಿಸಿ ಬೊಂಬೆಗಳನ್ನು ತೆರವು ಗೊಳಿಸಲಾಗುತ್ತದೆ. ಚನ್ನಪಟ್ಟಣ, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ನಾನಾ ಕಡೆ ಈ ಆಕರ್ಷಕ ಬೊಂಬೆಗಳನ್ನು ಸಂಗ್ರಹಿಸಲಾಗಿದೆ ಎಂದು ಲಲಿತ ಜಯಣ್ಣ ಹೇಳುತ್ತಾರೆ. ಬೊಂಬೆ ಪ್ರದರ್ಶನದಲ್ಲಿ ತಿರುವನಂತಪುರದ ಅನಂತಪದ್ಮನಾಭ ಸ್ವಾಮಿ, ರಾಧಾಕೃಷ್ಣ ದೋಣಿ ವಿಹಾರ, ಗ್ರಾಮೀಣ ಬದುಕಿನ ಚಿತ್ರಣ ಬಿಂಬಿಸುವ ಬೊಂಬೆಗಳು, ಆಧುನಿಕ ಕೃಷಿ ಪದ್ಧತಿಯಲ್ಲಿ ಟ್ರಾಕ್ಟರ್ ಬಳಕೆಯಿಂದ ಬತ್ತದ ಬಿತ್ತನೆ, ಕಟಾವು, ಚೀಲ ತುಂಬುವ ದೃಶ್ಯಗಳನ್ನು ಒಳಗೊಂಡ ಮನಮೋಹಕ ಬೊಂಬೆಗಳನ್ನು ನೋಡಬಹುದು. ಸುದೀರ್ಘ 25 ವರ್ಷಗಳಿಂದ ಪಟ್ಟದ ಬೊಂಬೆಗಳನ್ನು ಕೂರಿಸುವ ಕಾಯಕವನ್ನು ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬಂದಿದ್ದಾರೆ. ಆಸಕ್ತರು ಇವುಗಳನ್ನು ವೀಕ್ಷಿಸಬೇಕೆಂದು ಬಯಸಿದರೆ ಅವರ ಭವ್ಯ ನಿವಾಸಕ್ಕೊಮ್ಮೆ ಭೇಟಿ ನೀಡಬಹುದಾಗಿದೆ.
ಜೇನುಕಲ್ ಸಿದ್ದೇಶ್ವರ ಸ್ವಾಮಿ ದಸರಾ ಮಹೋತ್ಸವ: ಅರಸೀಕೆರೆ ತಾಲೂಕಿನ ಇತಿಹಾಸ ಪ್ರಸ್ಟಿಜಕ ಜೇನುಕಲ್ ಸಿದ್ದೇಶ್ವರ ಸ್ವಾಮಿ ದಸರಾ ಮಹೋತ್ಸವ ಅ.14ನೇ ಸೋಮವಾರ ಮಧ್ಯಾಹ್ನ 2 ಕ್ಕೆ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಸಿಂಗಟಗೆರೆ ರಾಮಣ್ಣ ತಿಳಿಸಿದ್ದಾರೆ.