ಸರ್ಕಾರ ಜಿಲ್ಲೆ ದತ್ತು ತೆಗೆದುಕೊಳ್ಳಲಿ
ಹಾಸನ: ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಹಾಸನ ಜಿಲ್ಲೆಯನ್ನು ದತ್ತು ತೆಗೆದುಕೊಳ್ಳಲಿ. ಒಟ್ಟಿನಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಸರ್ಕಾರ ಮುಂದಿನ ಲೋಕಸಭಾ ಚುನಾವಣೆಯ ಒಳಗಾಗಿ ಎಷ್ಟು ಅನುದಾನ ಬಿಡುಗಡೆ ಮಾಡಲು ಸಾಧ್ಯವೋ ಅಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು. ಜಿಲ್ಲೆಯನ್ನು ಅಭಿವೃದ್ಧಿ ಪಡಿಸಿ ಬೇಕಾದರೆ ದೇವೇಗೌಡರನ್ನು ಸೋಲಿಸುವಂತೆ ಜನರನ್ನು ಕೇಳಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು. ಅವರು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ವಿದ್ಯುತ್ ಯೋಜನೆಗೆ ಚಾಲನೆ ನೀಡಿದ್ದು, ಅದು ಇನ್ನು ಪೂರ್ಣಗೊಂಡಿಲ್ಲ. ಅದೇ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಜಿಲ್ಲೆಗೆ ನೀಡಿದ ಅನೇಕ ಅಭಿವೃದ್ಧಿ ಕೆಲಸಗಳು ಅರ್ಧಕ್ಕೆ ನಿಂತು ಹೋಗಿವೆ. ಯಡಿಯೂರಪ್ಪನವರ ಕಾಲದಲ್ಲಿ ಸಿಎಂ ಮನೆ ಮುಂದೆ ಧರಣಿ ನಡೆಸಿದವು, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅಧಿಕಾರವಧಿಯಲ್ಲಿ ಅನುದಾನ ನೀಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈಗಲಾದರೂ ಕಾಂಗ್ರೆಸ್ ಸರ್ಕಾರ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವುದಾದರೇ ದತ್ತು ತೆಗೆದುಕೊಳ್ಳಲಿ, ಅದಕ್ಕೆ ನಾವು ತುಂಬಾ ಆಬಾರಿಯಾಗಿರುತ್ತೇವೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ: ಚುನಾವಣೆಯ ಚಕ್ಕಂದ ಆಟಕ್ಕೆ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಕಾವೇರಿಯನ್ನು ಉಳಿಸಲು ನಾನು ಸಾಕಷ್ಟು ಹೋರಾಟಗಳನ್ನು ಮಾಡಿದೆ ಎಂದ ಅವರು, ಪ್ರಸ್ತುತ ಉತ್ತಮ ಮಳೆಯಾಗಿರುವುದರಿಂದ ನೀರಿನ ಸಮಸ್ಯೆ ಉದ್ಭವಹಿಸಿಲ್ಲ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಇರುವುದಿಲ್ಲ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ವಿರೋಧಿಸುವ ಶಕ್ತಿ ಜನತೆಗೆ ಇದೆ. ಈಗಾಗಲೇ ನಾನು 17 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಜನರ ಮನಸ್ಸಿನ ಭಾವನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತಿಳಿದುಕೊಂಡಿರುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನು ಹಲವು ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ದೆಹಲಿಯಲ್ಲಿ ಕುಳಿತು ದೇಶಾವಳಿದ ಯಾವ ಪಕ್ಷದ ಸರ್ಕಾರಗಳು ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದವು ಎಂಬುದು ಜನತೆಗೆ ತಿಳಿದಿದೆ. ಹಾಗಾಗಿ ತೃತೀಯ ರಂಗ ನೇತೃತ್ವದ ಪಕ್ಷಗಳನ್ನು ಜನತೆ ಬೆಂಬಲಿಸಲಿದ್ದಾರೆ. ಯಾವ ಮೋದಿನೂ ಇಲ್ಲ, ಮತ್ತೊಬ್ಬರು ಇಲ್ಲ ಎಂದು ಗೌಡರು ಗುಡುಗಿದರು.
ಸುಪ್ರಿಂಕೋರ್ಟ್ಗೆ: ಬೆಂಗಳೂರಿನ ಜೆಡಿಎಸ್ ಕಚೇರಿ ಇರುವ ಸ್ಥಳ ಕಾಂಗ್ರೆಸ್ಗೆ ಸೇರಿದ್ದರಿಂದ 3 ತಿಂಗಳೊಳಗೆ ಬಿಟ್ಟು ಕೊಡುವಂತೆ ಹೈಕೋರ್ಟ್ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದರು. 1954ರಲ್ಲಿ ಕಟ್ಟಡ ನಿರ್ಮಾಣ ಆಯಿತು. ನಂತರ ಕಾಂಗ್ರೆಸ್ ಇಬ್ಭಾಗವಾದ ಪರಿಣಾಮ ನಂತರ ನಾವು ಈ ಜಾಗ ಪಡೆದುಕೊಂಡೆವು. ಆದರೆ 1984ರಲ್ಲಿ ಈ ವಿರುದ್ಧ ಕಾಂಗ್ರೆಸ್ನವರು ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿದ್ದರು. ನಂತರ ಇದರ ವಿರುದ್ಧ ನಾವು ಮೇಲ್ಮನವಿ ಸಲ್ಲಿಸಿದ್ದೇವು. ಈಗ ಹೈಕೋರ್ಟ್ ಈ ಜಾಗವನ್ನು ಬಿಟ್ಟುಕೊಡುವಂತೆ ತೀರ್ಪು ನೀಡಿದೆ. ಆದ್ದರಿಂದ ಆದೇಶ ಪತ್ರ ಸಿಕ್ಕ ಕೂಡಲೇ ಈ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಸ್ಪಷ್ಟ ಪಡಿಸಿದರು. ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮುಖಂಡ ಕೆ.ಎಂ. ರಾಜೇಗೌಡ ಇತರರು ಇದ್ದರು.