ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಬೇಲೂರು: ಕ್ರೀಡಾ ಪಟುಗಳು ಆರೋಗ್ಯಕರವಾಗಿರಲು ವಿಟಮಿನ್‌ಯುಕ್ತ ಆಹಾರ ಸೇವನೆ ಮಾಡಬೇಕು ಎಂದು ಕಬಡ್ಡಿ ಆಟಗಾರ ಹಾಗೂ ಕಾಂಗ್ರೆಸ್ ಮುಖಂಡ ಪೂರ್ಣೇಶ್ ಹೇಳಿದರು.
ಪಟ್ಟಣದ ವೈಡಿಡಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಮಲೆನಾಡು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆಟಗಾರರು ಗೆಲ್ಲುವ ಗುರಿ ಹೊಂದಬೇಕು. ಆಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ನಾನು ವಿದ್ಯಾರ್ಥಿ ಜೀವನದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮವಾಗಿ ಕಬಡ್ಡಿ ಪಂದ್ಯಾವಳಿಯಲ್ಲಿ ಆಡಿ ಬಹುಮಾನ ಪಡೆದ ದಿನಗಳನ್ನು ನೆನೆಪು ಮಾಡಿಕೊಂಡ ಅವರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮವಾಗಿ ಸಾಧನೆ ಮಾಡಿದಾಗ ಯಾವ ಕಂಪನಿಯಾಗಲಿ ನಿಮಗೆ ಉದ್ಯೋಗ ನೀಡುತ್ತದೆ. ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆರ್ಥಿಕ ಸಹಾಯ ಮಾಡುತ್ತಿದ್ದರೂ ಕೆಲವರು ಇನ್ನು ಸೌಲಭ್ಯ ವಂಚಿತರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದು, ಅವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೊ. ಡಿ.ಎಸ್.ರಾಜು ಮಾತನಾಡಿ, ಮಲೆನಾಡು ವಿಭಾಗದ ಕಬಡ್ಡಿ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಶೇಷ ಸ್ಥಾನವಿದ್ದು, ಮುಂದೆ ಆ ಸ್ಥಾನ ಕಾಯ್ದು ಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಲೇಜು ದೈಹಿಕ ಮುಖ್ಯಸ್ಥ ಎಸ್.ಎನ್.ಮಹದೇವಪ್ಪ, ಪ್ರೊ. ಜಯರಾಮು, ಪ್ರೊ. ಜಯಣ್ಣಗೌಡ, ಪ್ರೊ. ಸತೀಶ್, ಮಮತ, ಸುಧಾ ದೇವರಸೇಗೌಡ, ಅರ್.ಎಸ್.ಮಹೇಶ್, ಕುಮಾರ್,ದೇವರಾಜು ಹಾಜರಿದ್ದರು.