ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾನೂನು ಪಾಲಿಸಿ, ಜೊತೆಗೆ ಗೌರವಿಸಿ

Vishwanath S
Updated On : 17 Oct 2013, 12:20 pm

ಕ.ಪ್ರ.ವಾರ್ತೆ , ಹೊಳೆನರಸೀಪುರ , ಅ.16
ಪೋಷಕರು ತಮ್ಮ ಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಹಾಗೂ ವಾಹನ ಚಾಲನಾ ಪರವಾನಗಿ ಇಲ್ಲದೇ ವಾಹನಗಳನ್ನು ಕೊಡಿಸಬಾರದು. ಸಂಚಾರಿ ನಿಯಮ ಕಟ್ಟು ನಿಟ್ಟಾಗಿ ಪಾಲಿಸದಿದ್ದಲ್ಲಿ ನೀವು ಕಟ್ಟುವ ದಂಡದ ಹಣದಲ್ಲಿ ಯಾವುದೇ ಇಲಾಖೆ ಅಥವಾ ಸರ್ಕಾರ ಶ್ರೀಮಂತಗೊಳ್ಳುವುದಿಲ್ಲ, ಅದಕ್ಕಿಂತಲೂ ಬಹುಮುಖ್ಯ ನಿಮ್ಮೆಲ್ಲರ ಅಮೂಲ್ಯವಾದ ಜೀವ, ಅದರ ಉಳಿವಿಗಾಗಿಯಾದರೂ ಕಾನೂನನ್ನು ಪಾಲಿಸಿ ಹಾಗೂ ಗೌರವಿಸುವುದನ್ನು ಕಲಿಯಿರಿ...
ಇದು ಜಿಲ್ಲೆಯ ಅತ್ಯುತ್ಸಾಹಿ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ ಅವರ ಕಳಕಳಿಯ ನುಡಿಗಳು.
ಪಟ್ಟಣದ ಶಾದಿಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಪೊಲೀಸ್ ಹಾಗೂ ನಾಗರಿಕ ವ್ಯವಸ್ಥೆಯಲ್ಲೂ ಬದಲಾವಣೆಯನ್ನು ತರಬೇಕೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿಯೂ ಜನಸಂಪರ್ಕ ಸಭೆಗಳನ್ನು ಏರ್ಪಡಿಸಿ ನಾಗರಿಕರ ಕುಂದು ಕೊರತೆ, ದೂರುಗಳನ್ನು ಆಲಿಸಿ ಪೊಲೀಸ್ ಇಲಾಖೆಯಲ್ಲಿನ ಕರ್ತವ್ಯ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆಯ ಜಾರಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮೊದಲಿಗೆ ಸಭೆಯಲ್ಲಿ ನಾಗರಿಕರ ದೂರು, ಸಲಹೆಗಳು, ದು:ಖ ದುಮ್ಮಾನ ಹಾಗೂ ನಿರೀಕ್ಷೆಗಳನ್ನು ಸಾವಧಾನದಿಂದ ಆಲಿಸಿದ ಎಸ್ಪಿ ಚನ್ನಣ್ಣನವರ್ ನಂತರ ಮಾತನಾಡಿ, ಸಭೆಯಲ್ಲಿ ಮಾತನಾಡಿದ ಪ್ರತಿ ನಾಗರಿಕರ ಪ್ರಶ್ನೆಗೂ ಸಮಾಧಾನಚಿತ್ತದಿಂದ ಉತ್ತರಿಸಿದರು. ಹಾಗೂ ಶೀಘ್ರದಲ್ಲಿಯೇ ಕೈಗೊಳ್ಳಬಹುದಾದ ಕ್ರಮಗಳ ಜಾರಿಗೆ ಸ್ಥಳದಲ್ಲಿದ್ದ ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದರು.
ಕಾನೂನು ಜಾರಿಗೆ ಸಂಪೂರ್ಣ ಬದ್ಧ:  ವ್ಯವಸ್ಥಿತವಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಜಾರಿಗೆ ತಾವು ಸಂಪೂರ್ಣ ಬದ್ಧರಾಗಿರುವುದಾಗಿ ತಿಳಿಸಿದ ಅವರು, ಯಾವುದೇ ಕಾನೂನು ಕ್ರಮಗಳ ಜಾರಿ ಸಂದರ್ಭದಲ್ಲಿ ನಾಗರಿಕರು ಮುಕ್ತ ಮನಸ್ಸಿನ ಸಹಕಾರ ನೀಡುವಂತೆ ಕೋರಿದರು.
ಸಭೆಯಲ್ಲಿ ಅತಿ ಮುಖ್ಯವಾಗಿ ಮತ್ತು ಅತಿ ಹೆಚ್ಚಿನದಾಗಿ ಬಂದ ದೂರುಗಳೆಂದರೆ ಪಟ್ಟಣದಲ್ಲಿನ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿರುವ ಕುರಿತಾಗಿತ್ತು. ಪೇಟೆ ಮುಖ್ಯ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ತಪ್ಪಿಸಿ, ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವಂತೆ, ಶಾಲಾ-ಕಾಲೇಜುಗಳು ಬಿಟ್ಟ ಸಮಯದಲ್ಲಿ ಪೇಟೆ ಬೀದಿಯಲ್ಲಿ ಪುಂಡರ ಹಾವಳಿ, ತ್ರಿಬ್ಬಲ್ ರೈಡಿಂಗ್, ಮದ್ಯಪಾನ ಮಾಡಿ ವಾಹನ ಚಾಲನೆ, ಅತಿವೇಗದ ಚಾಲನೆ, ಬಸ್ ನಿಲ್ದಾಣ ಬಳಿಯಲ್ಲಿನ ಪುಂಡರ ಹಾವಳಿಯನ್ನು ತಪ್ಪಿಸುವುದರ ಕುರಿತಂತೆ ಗಣ್ಯರಾದ ಎಚ್.ವಿ.ಸುರೇಶ್‌ಕುಮಾರ್, ಎಂ.ಎನ್.ಜೈಪ್ರಕಾಶ್, ಮುಜಾಹಿದ್‌ಪಾಷ, ಮಾದಿಗ ದಂಡೋರ ವಿಜಯಕುಮಾರ್ ಮೊದಲಾದವರು ವಿಷಯ ಪ್ರಸ್ತಾಪಿಸಿದರು.
ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಬಡ್ಡಿ ದಂಧೆ, ಮರಳು ಲೂಟಿ, ಇಸ್ವೀಟ್ ದಂಧೆ, ಅಕ್ರಮ ಮದ್ಯ ಮಾರಾಟ ತಪ್ಪಿಸುವಂತೆ ಕೆ.ಆರ್.ಸುದರ್ಶನಬಾಬು, ರಾಧಾಕೃಷ್ಣಬಾಬು, ಮಾದಿಗ ದಂಡೋರ ಕೆ.ಆರ್.ನಾಗರಾಜ್ ಮೊದಲಾದವರು ದೂರಿದರು.
ಕುಡುಕರ ಅಡ್ಡೆಯಾದ ಸೇತುವೆ:  ಕಡವಿನಕೋಟೆ ಲೋಕೇಶ್ ಮಾತನಾಡಿ  ಹಾಸನ-ಮೈಸೂರು ರಸ್ತೆಯಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಶತಮಾನದ ಹಿಂದೆಯೇ ನಿರ್ಮಿಸಿರುವ ವಾಣಿ ವಿಲಾಸ ಸೇತುವೆ ರಾತ್ರಿ ವೇಳೆ ಕುಡುಕರ ಅಡ್ಡೆಯಾಗಿದ್ದು, ಇದನ್ನು ಕೂಡಲೇ ನಿಯಂತ್ರಿಸುವಂತೆ ಕೋರಿದರು. ರಂಗೇಗೌಡ, ಮಂಜೇಗೌಡ ಮಾತನಾಡಿ ಗ್ರಾಮೀಣ ಭಾಗದಲ್ಲಿನ ನದಿ ಪಾತ್ರದಿಂದ ಅಕ್ರಮವಾಗಿ ಮರಳನ್ನು ತೆಗೆದು ಲಾರಿಗಳಲ್ಲಿ ಹೊರ ಊರುಗಳಿಗೆ ಸಾಗಿಸುವವರನ್ನು ಮೊದಲು ಬಂಧಿಸಿ. ಆದರೆ ಮನೆ ಕಟ್ಟಲು ಟ್ರಾಕ್ಟರ್‌ಗಳಲ್ಲಿ ಕೊಳ್ಳುವ ಮರಳನ್ನು ಹಿಡಿಯದಂತೆ ಪೊಲೀಸರಿಗೆ ಸೂಚಿಸುವಂತೆ ಕೋರಿದರು.
ರೈತ ಸಂಘದ ಪುಟ್ಟಸ್ವಾಮಿ ಮಾತನಾಡಿ, ರಾತ್ರಿ ವೇಳೆಯಲ್ಲಿ ಲಾರಿ ಹಾಗೂ ಕ್ಯಾಂಟರ್‌ಗಳಲ್ಲಿ ಅಕ್ರಮವಾಗಿ ಕದು ್ದಮುಚ್ಚಿ ಮರಗಳನ್ನು ಸಾಗಿಸುತ್ತಿದ್ದರೂ ಯಾರೊಬ್ಬರನ್ನೂ ಪರಿಶೀಲನೆ ನಡೆಸಿಲ್ಲ ಮತ್ತು ಬಂಧಿಸಿಲ್ಲ ಎಂದು ದೂರಿದರು.
ಎಲ್ಲಾ ಚಿನ್ನ ಬೆಳ್ಳಿ ಅಂಗಡಿಯವರೂ ಕಳ್ಳರೆ?:  ಅಲ್ಲದೇ ಪೊಲೀಸರ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ, ಅಲ್ಲದೇ ಯಾವೊಬ್ಬ ಕಳ್ಳ ಯಾವುದಾದರೊಂದು ಚಿನ್ನದ ಅಂಗಡಿಯನ್ನು ತೋರಿ ಈ ಅಂಗಡಿಗೆ ಚಿನ್ನವನ್ನು ಮಾರಿದ್ದೆನೆಂದು ಹೇಳಿದ ಕೂಡಲೇ ಕಳ್ಳನ ಮಾತನ್ನು ನಂಬಿ ಏಕಾಏಕಿ ಚಿನ್ನ ಬೆಳ್ಳಿ ಅಂಗಡಿ ಮಾಲೀಕರನ್ನು ಠಾಣೆಗೆ ಕರೆದೊಯ್ಯುವ ಪೊಲೀಸರು, ಚಿನ್ನಬೆಳ್ಳಿ ವರ್ತಕರ ಮಾತನ್ನು ಮಾತ್ರ ಕೇಳುವ ಸಂಯಮ ತೋರುವುದಿಲ್ಲ. ಹಾಗಿದ್ದಲ್ಲಿ ಎಲ್ಲಾ ಚಿನ್ನ ಬೆಳ್ಳಿ ಅಂಗಡಿಯವರೂ ಕಳ್ಳರೇ ಎಂದು ಪುರಸಭೆ ಸದಸ್ಯ ಹಾಗೂ ವರ್ತಕ ಎ.ಆರ್.ರವಿಕುಮಾರ್ ಎಸ್ಪಿ ಅವರನ್ನು ಪ್ರಶ್ನಿಸಿದರು.
ಬಾಗೀವಾಳು ಗ್ರಾಪಂ ಮಾಜಿ ಅಧ್ಯಕ್ಷ ಮೂಸಾಖಾನ್ ಮಾತನಾಡಿ, ಪಟ್ಟಣದಲ್ಲಿ ಸಂಚಾರಿ ಅವ್ಯವಸ್ಥೆ ಹಾಗೂ ಪೇಟೆ ಬೀದಿಯಲ್ಲಿನ ಸಂಚಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಪೇಟೆ ಬೀದಿಯಲ್ಲಿನ ಎರಡೂ ಬದಿಗಳನ್ನೂ ಅಗಲೀಕರಣಗೊಳಿಸುವಂತೆ ಹೇಳಿದಾಗ ಸಭೆಯಲ್ಲಿದ್ದ ಬಹುತೇಕ ವರ್ತಕರ ಕೆಂಗಣ್ಣು ಮೂಸಾಖಾನ್ ಅವರ ಮೇಲೆ ಬಿದ್ದಿದ್ದು ಕಂಡುಬಂತು.
ಎಲ್ಲ ಪ್ರಶ್ನೆಗಳಿಗೂ ಶಾಂತ ರೀತಿಯಿಂದ ಉತ್ತರಿಸಿದ ರವಿ ಚನ್ನಣ್ಣನವರ್, ಮಾನವ ಹಕ್ಕುಗಳನ್ನು ಗೌರವಿಸಿ, ಅನ್ಯಾಯ ಮತ್ತು ಅಕ್ರಮಗಳನ್ನು ಹತ್ತಿಕ್ಕುವುದು ಪೊಲೀಸರ ಕರ್ತವ್ಯವಾಗಿದ್ದು, ಕಾನೂನನ್ನು ಹೇಗೆ ಬೇಕಾದರೂ ತಿರುಚುವ ಯತ್ನಗಳಿಗೆ ಕಡಿವಾಣ ಹಾಕಿ, ಕಾನೂನನ್ನು ಒಳ್ಳೆಯ ಉದ್ದೇಶಗಳಿಗೆ, ತಪ್ಪಿತಸ್ಥರಲ್ಲದವರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಬಳಸಬೇಕೆನ್ನುವ ಉದ್ದೇಶದೊಂದಿಗೆ ಪೊಲೀಸರು ಕಾರ್ಯೋನ್ಮುಖರಾಗಿದ್ದು, ಈ ವ್ಯವಸ್ಥೆಯಲ್ಲಿ ಲೋಪಗಳು ಕಂಡುಬಂದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ತಿಳಿಸಿದರು. ಪಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಲು ಮೊದಲು ಸೂಕ್ತ ಸ್ಥಳಗಳನ್ನು ಪುರಸಭೆಯು ಗುರುತಿಸಿದಲ್ಲಿ, ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿದ ನಂತರ ಕಾನೂನನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲು ಉಪಯುಕ್ತವಾಗುತ್ತದೆ ಎಂದು ಪುರಸಭೆಗೆ ಮನವಿ ಮಾಡಿದರು.
ಅಲ್ಲದೇ ಇಲಾಖೆಯಲ್ಲಿ ಪೊಲೀಸರ ಕೊರತೆಯಿಂದಾಗಿ ಕಾನೂನು ಸುವ್ಯವಸ್ಥೆಯ ಜಾರಿಗೆ ಉಂಟಾಗಿರುವ ತೊಡಕುಗಳನ್ನು ಪರಿಹರಿಸಲು ಸರ್ಕಾರ ಕೂಡಲೇ ಗಮನಹರಿಸಿ ಇಲಾಖೆಗೆ ಅವಶ್ಯಕವಿರುವ ಸಿಬ್ಬಂದಿ ನೇಮಿಸಿದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಟ್ರಾಫಿಕ್ ಸಮಸ್ಯೆಗೆ ನಾಲ್ವರು ಪೊಲೀಸರು:  ಇದೇ ಸಂದರ್ಭದಲ್ಲಿ ತಾಲೂಕಿನ ಮಾವಿನಕೆರೆ ಬೆಟ್ಟಕ್ಕೆ ಪೊಲೀಸ್ ಔಟ್‌ಪೋಸ್ಟ್ ಸ್ಥಾಪನೆ, ಪಟ್ಟಣದಲ್ಲಿ ವಾರದೊಳಗೆ ಸಂಚಾರಿ ವ್ಯವಸ್ಥೆಯ ಸುಧಾರಣೆಗಾಗಿ ಒಬ್ಬರು ಎಎಸ್ಸೈ ಹಾಗೂ ನಾಲ್ವರು ಪೊಲೀಸರನ್ನು ಟ್ರಾಫಿಕ್ ವ್ಯವಸ್ಥೆಗೆ ನಿಯೋಜಿಸುವುದು, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತಂತೆಯೂ ಕ್ರಮ ಕೈಕೊಳ್ಳುವುದಾಗಿ ಎಸ್ಪಿ ತಿಳಿಸಿದರು.
ಎಎಸ್ಪಿ ವಿನಾಯಕಪಾಟೀಲ್, ಸಿಪಿಐ ರಾಜು, ನಗರ ಠಾಣೆ ಎಸ್ಸೈ ಶಿವಕುಮಾರ್, ಗ್ರಾಮಾಂತರ ಠಾಣೆ ಎಸ್ಸೈ ಮಂಜುನಾಥ್, ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement