ಕಾಲುಬಾಯಿ ರೋಗ ಹರಡದಂತೆ ಕ್ರಮವಹಿಸಲು ಡಿಸಿ ಸೂಚನೆ
ಹಾಸನ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಿ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ರೈತರಿಗೆ ಮನವರಿಕೆ ಮಾಡಿಸುವುದರ ಜೊತೆಗೆ ಹೋಬಳಿ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂತೆ ನಡೆಯುವ ಸ್ಥಳಗಳಲ್ಲಿ ಶಿಬಿರ ಏರ್ಪಡಿಸಿ ಜಾನುವಾರುಗಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲುಬಾಯಿ ರೋಗಕ್ಕೆ ಅಗತ್ಯ ಔಷಧಿ ಲಭ್ಯವಿದ್ದು, ರೈತರಿಗೆ ಸಹಕಾರಿಯಾಗುವಂತೆ ಪ್ರತಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸಹಾಯವಾಣಿ ತೆರೆದು ಕರೆ ಬಂದ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ಒದಗಿಸುವಂತೆ ತಿಳಿಸಿದರು.
ಅಲ್ಲದೆ ಚಿಕಿತ್ಸೆ ನೀಡಲು ಗ್ರಾಮಗಳಿಗೆ ತೆರಳಲು ಅವಶ್ಯವಿರುವ ವಾಹನಗಳಿಗಾಗಿ ತಾಲೂಕು ತಹಸೀಲ್ದಾರರು ಎರಡು ಜೀಪುಗಳನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ಸುಪರ್ಧಿಗೆ ನೀಡುವಂತೆ ಸೂಚಿಸಿದರು.
ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡುವುದರ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದ ಜಿಲ್ಲಾಧಿಕಾರಿ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಸಭೆ ನಡೆಸಿ ರೋಗ ಕುರಿತು ಜನರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಕಾಲು ಬಾಯಿ ರೋಗದಿಂದ ಮರಣಿಸಿದ ಜಾನುವಾರುಗಳ ಮಾಹಿತಿ ನೀಡಲು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿದ್ದು, ತಹಸೀಲ್ದಾರ್ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರು ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಮಿತಿ ಸದಸ್ಯರಾಗಿರುತ್ತಾರೆ.
ಕಾಲು ಬಾಯಿ ಜ್ವರ ರೋಗದಿಂದ ಮರಣಿಸಿದ ಜಾನುವಾರುಗಳ ನಿಖರ ಮಾಹಿತಿಯನ್ನು ಜಾನುವಾರು ಮರಣಿಸಿದ 72 ಗಂಟೆಯೊಳಗೆ ಮರಣೋತ್ತರ ಪರೀಕ್ಷೆ ವರದಿಯೊಂದಿಗೆ ನೀಡಬೇಕು. ಈಗಾಗಲೇ ಮರಣಿಸಿರುವ ಜಾನುವಾರುಗಳ ಮರಣೋತ್ತರ ಪರೀಕ್ಷಾ ವರದಿ ಇಲ್ಲದಿದ್ದಲ್ಲಿ ಮಹಜರ್ ವರದಿ (ಪಂಚನಾಮೆ) ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 7,75,771 ಜಾನುವಾರುಗಳಿದ್ದು, 6,73,829 ಜಾನುವಾರುಗಳಿಗೆ ಕಾಲು ಬಾಯಿ ಜ್ವರ ರೋಗದ ವಿರುದ್ಧ ಲಸಿಕೆ ಹಾಕಲಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಯರಾಂ ಮಾಹಿತಿ ನೀಡಿದರು. 402 ಜಾನುವಾರುಗಳಿಗೆ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗಿದೆ, 124 ಜಾನುವಾರುಗಳು ಗುಣಮುಖವಾಗಿವೆ, 23 ಜಾನುವಾರುಗಳು ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದರು.
ತಾಲೂಕು ಮಟ್ಟದ ಸಹಾಯವಾಣಿ - ಅರಕಲಗೂಡು 08175-220227, ಅರಸೀಕೆರೆ 08174-231154, ಆಲೂರು 08170-218229, ಚನ್ನರಾಯಪಟ್ಟಣ 08176-253045, ಹೊಳೆನರಸೀಪುರ 08175-273237, ಹಾಸನ 08172-268359, ಸಕಲೇಶಪುರ 08177-244008,ಬೇಲೂರು 08177-222371.