ಜಿಲ್ಲಾದ್ಯಂತ ಸಂಭ್ರಮದ ಬಕ್ರೀದ್
ಕ.ಪ್ರ.ವಾರ್ತೆ , ಹಾಸನ , ಅ.16
ಜಿಲ್ಲಾದ್ಯಂತ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಬುಧವಾರ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹಾಸನ ನಗರ, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ, ಬೇಲೂರು, ಸಕಲೇಶಪುರ, ಅರಕಲಗೂಡು ಮತ್ತು ಆಲೂರು ತಾಲೂಕುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಹಾಗೂ ಹಣಸೆಕೆರೆ ಸಮೀಪ ಇರುವ ಹೊಸ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳೋಪಾದಿಯಲ್ಲಿ ಸಾವಿರಾರು ಮುಸ್ಲಿಮರು ಸರ್ವರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಪ್ರವಾದಿ ಇಬ್ರಾಹಿಂ ಅಲ್ಲಾನ ಆಜ್ಞೆಯಿಂದ ಪ್ರವಾದಿ ಇಬ್ರಾಹಿಂಗೆ ಬಲಿಕೊಡುವ ಸಂದರ್ಭದಲ್ಲಿ ಪ್ರಾಣಿ ಬಲಿಕೊಟ್ಟಿದ್ದರ ದ್ಯೋತಕ ಹಾಗೂ ಬಲಿದಾನದ ಸಂಕೇತವಾಗಿ ಆಚರಿಸುವ ಹಬ್ಬದಂದು ಎಲ್ಲರೂ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಅದರಂತೆ ರೈತರು ಹಾಗೂ ಎಲ್ಲಾ ವರ್ಗದ ಜನರ ಕಷ್ಟ ಕಾರ್ಪಣ್ಯಗಳು ದೂರವಾಗಲಿ ಎಂದು ಪ್ರಾರ್ಥಿಸಿದರು. ಹಾಗೂ ಈ ಹಬ್ಬದ ವೈಶಿಷ್ಟವಾಗಿರುವ ದಾನ ನೀಡಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಶಾಸಕ ಪ್ರಕಾಶ್ ಉಪಸ್ಥಿತಿ: ಹಳೇ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಸ್ಥಳಕ್ಕೆ ಭೇಟಿ ನೀಡಿ ಮುಸ್ಲಿಮರನ್ನು ಅಪ್ಪಿಕೊಂಡು ಶುಭ ಕೋರಿದರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಹಾಗೂ ಇತರ ಗಣ್ಯರು ಸಹ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ ಶುಭ ಕೋರಿದರು.
ಹೊಳೆನರಸೀಪುರದಲ್ಲಿ ಸಡಗರದ ಈದ್-ಏ-ಅಜ
ಹೊಳೆನರಸೀಪುರ: ತ್ಯಾಗ ಬಲಿದಾನದ ಪ್ರತೀಕವಾದ ಪವಿತ್ರ ಬಕ್ರೀದ್ (ಈದ್-ಏ-ಅಜ-) ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಮರು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹಿಂದೂಗಳು ಆಚರಿಸುವ ಮಹಾಲಯ ಅಮಾವಾಸ್ಯೆಗೆ ಮಗನನ್ನು ಮಾರಿಯಾದರೂ ಹಿರಿಯರಿಗೆ ಪೂಜಿಸಿ ಸಂತೈಸು (ಎಡೆ ಇಕ್ಕುವುದು) ಎಂಬಂತೆಯೇ, ಮಹಾಲಯ ಅಮಾವಾಸ್ಯೆಯ ಆಜು ಬಾಜಿನಲ್ಲೇ ಮುಸ್ಲಿಮರು ಆಚರಿಸಲ್ಪಡುವ ಬಕ್ರೀದ್ ಕೂಡಾ ಮಗನನ್ನೇ ತನ್ನ ದೈವದ ಮಾತಿನಂತೆ ಬಲಿಕೊಟ್ಟು ಹಿರಿಕರನ್ನು ಪೂಜಿಸಲು ಮುಂದಾಗುವ ತ್ಯಾಗ ಬಲಿದಾನದ ಸಂಕೇತವೆನಿಸಿರುವ ಪವಿತ್ರ ಹಬ್ಬವೆನಿಸಿದೆ.
ಇಬ್ರಾಹಿಂ-ಖಲೀಲ್-ಉಲ್ಲಾ ಎಂಬ ಪ್ರವಾದಿಗೆ ಕನಸಿನಲ್ಲಿ ನಿನಗೆ ಪ್ರಿಯವಾದ ವಸ್ತುವನ್ನು ನನ್ನ ಹೆಸರಿನಲ್ಲಿ ಬಲಿ ನೀಡು ಎಂಬ ದೇವವಾಣಿ ಕೇಳಿಸಿತು. ಕನಸಿನಲ್ಲಿ ಕೇಳಿದ ದೇವವಾಣಿಯಂತೆ ಪ್ರವಾದಿಯು ಬೆಳಿಗ್ಗೆ 1 ಸಾವಿರ ಒಂಟೆಗಳನ್ನು ಬಲಿ ನೀಡಿದರು. ಅಂದು ರಾತ್ರಿ ಮತ್ತೊಮ್ಮೆ ದೇವರು ಕನಸಿನಲ್ಲಿ ಬಂದು ನಿನಗೆ ಪ್ರಿಯವಾದ ವಸ್ತುವನ್ನು ನನ್ನ ಹೆಸರಿನಲ್ಲಿ ಬಲಿ ನೀಡು ಎಂದು ತಿಳಿಸಿತು. ಪ್ರವಾದಿಯು ಮರು ದಿನ 2ಸಾವಿರ ಒಂಟೆಗಳನ್ನು ಬಲಿ ನೀಡಿದರು.
ಆದರೆ ಮರಳಿ ಅದೇ ದೈವವಾಣಿಯು ನಿನಗೆ ಅತ್ಯಂತ ಪ್ರಿಯವಾದ ವಸ್ತುವನ್ನು ನನ್ನ ಹೆಸರಿನಲ್ಲಿ ಬಲಿ ನೀಡುವಂತೆ ಸೂಚಿಸಿದಾಗ ಕೊನೆಗೆ ಪ್ರವಾದಿಯು ಅತ್ಯಂತ ಪ್ರೀತಿ ಪಾತ್ರನಾದ ತನ್ನ ಮಗ ಇಸ್ಮಾಯಿಲ್ ಖಲೀಲ್-ಉಲ್ಲಾನನ್ನು ಅತ್ಯಂತ ಪ್ರೀತಿಯಿಂದ ಸಿಂಗರಿಸಿ ದೇವರ ಹೆಸರಿನಲ್ಲಿ ಬಲಿ ನೀಡಲು ಮನೆಯಿಂದ ದೂರದ ಪ್ರದೇಶಕ್ಕೆ ಕರೆದೊಯ್ದು ಮಗನನ್ನು ದೇವರಿಗೆ ಬಲಿ ನೀಡಲು ಮುಂದಾಗುತ್ತಾನೆ. ತನ್ನ ಬಳಿಯಿದ್ದ ಚಾಕುವನ್ನು ತೆಗೆದು ಮಗನ ಕುತ್ತಿಗೆಯನ್ನು ಕೊಯ್ಯಲು ಮುಂದಾದಾಗ ಮಗನ ಕುತ್ತಿಗೆ ಕೊಯ್ಯಲು ಆಗಲಿಲ್ಲ. ಆಗ ದೈವವಾಣಿಯು ಇಬ್ರಾಹಿಂ-ಖಲೀಲ್-ಉಲ್ಲಾ ಎಂಬ ಪ್ರವಾದಿಯನ್ನು ನಿನ್ನ ಭಕ್ತಿ ಪರೀಕ್ಷಿಸಲು ಹೀಗೆ ಮಾಡಲಾಯಿತು ಎಂದು ಹೇಳಿ ನಿನ್ನ ಮಗನ ಬದಲಿಗೆ ಆತನ ಪಕ್ಕದಲ್ಲಿ ಸ್ವರ್ಗದಿಂದ ಕಳುಹಿಸಿದ ಕುರಿ ಇದ್ದು, ಅದನ್ನು ನನ್ನ ಹೆಸರಿನಲ್ಲಿ ಬಲಿ ನೀಡು ಎಂದು ಸೂಚಿಸಿತು. ದೈವವಾಣಿಯಂತೆ ಕುರಿಯನ್ನು ದೇವರಿಗೆ ಬಲಿ ನೀಡಲಾಯಿತು.
ಅಂದಿನಿಂದ ಅಲ್ಲಾ(ದೇವರ) ಹೆಸರಿನಲ್ಲಿ ಕುರಿಯನ್ನು ಬಲಿ ನೀಡಿ ಮೂರು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಬಡವರಿಗೂ, ಇನ್ನೊಂದು ಭಾಗವನ್ನು ಬಂಧುಗಳಿಗೂ ಹಂಚಿ ಇನ್ನುಳಿದ ಒಂದು ಭಾಗವನ್ನು ತನ್ನ ಕುಟುಂಬದವರೊಡನೆ ಸ್ವೀಕರಿಸುವ ಪದ್ಧತಿ ಬೆಳೆದುಬಂದಿದೆ ಎಂದು ಮುಸ್ಲಿಮರ ಪವಿತ್ರ ಖುರಾನ್ನಲ್ಲಿ ಹೇಳಲಾಗುತ್ತದೆ.
ಅದರಂತೆಯೇ ಇಲ್ಲಿನ ಮುಸ್ಲಿಮರು ಪಟ್ಟಣದ ಅರಕಲಗೂಡು ರಸ್ತೆಯಲ್ಲಿನ ಈದ್ಗಾ ಬಳಿಗೆ ಮೆರವಣಿಗೆಯಲ್ಲಿ ತೆರಳಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರ್ಮ ಗುರು ಅಬ್ದುಲ್ವಹಾಬ್ ಅಶ್ರಫಿ ಅವರು ಧಾರ್ಮಿಕ ಪ್ರವಚನವನ್ನು ನೀಡಿ, ಬಕ್ರೀದ್ಹ್ಬ್ಬದ ಮಹತ್ವವನ್ನು ಕುರಿತು ವಿವರಿಸಿದರು. ನಂತರ ಮುಸ್ಲಿಮರು ಹಿರಿಯರು ಕಿರಿಯರು ಎನ್ನದೇ ಎಲ್ಲರೊಂದಿಗೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಅರಕಲಗೂಡು ರಸ್ತೆಯಲ್ಲಿರುವ ಹಜರತ್ ಮಲಂಗ್ಶಾವಲಿ ದರ್ಗಾ ಹಾಗೂ ಹಜರತ್ ಸೈಯದ್ ಸೀನ್ಗೂ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಗರ ಪೊಲೀಸ್ ಠಾಣೆ ಪಿಎಸ್ಸೈ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಕಲೇಶಪುರದಲ್ಲಿಯೂ ತ್ಯಾಗ, ಬಲಿದಾನದ ಬಕ್ರೀದ್ ಪ್ರಾರ್ಥನೆ, ಸಂಭ್ರಮಾಚರಣೆ
ಸಕಲೇಶಪುರ: ತ್ಯಾಗ ಬಲಿದಾನ ಮಾಡುವ ಮನೋಭಾವ ಎಲ್ಲರಲ್ಲೂ ಮೂಡಲಿ ಎಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಬುಧವಾರ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಈದ್ಗಾ ಮೈದಾನದಲ್ಲಿ ಜಾಮೀಯಾ ಮತ್ತು ಲಬಾಬಿನ್ ಮಸೀದಿ ಗುರು ಮೌಲಾನ ಹಾತೀಮ್ ಅನ್ವರ್ಸಾಬ್ ನೇತೃತ್ವದಲ್ಲಿ ಸಾವಿರಾರು ಮುಸ್ಲಿಮರು ಬಕ್ರೀದ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿ ಗುರು ಮೌಲಾನ ಹಾತೀಮ್ ಅನ್ವರ್ಸಾಬ್ ಪ್ರವಚನ ನೀಡಿ, ಸತ್ಯ ನ್ಯಾಯ ಧರ್ಮದ ದಾರಿಯಲ್ಲಿ ಸಾಗುವವರಿಗೆ ಕಠಿಣ ಪರಿಕ್ಷೆಗಳು ಒಳಗಾಗುತ್ತವೆ. ಈ ಪರೀಕ್ಷೆಗಳಲ್ಲಿ ಸಫಲವಾದರೆ ಮಾತ್ರ ಮೋಕ್ಷದೊರೆಯುತ್ತದೆ. ಬಕ್ರೀದ್ ತ್ಯಾಗ ಬಲಿದಾನದಿಂದ ಮಾತ್ರ ವಿಶ್ವಾಸವನ್ನು ಗಟ್ಟಿಗೊಳಿಸಬಹುದು ಎಂಬ ಸಂದೇಶವನ್ನು ಸಾರುತ್ತದೆ ಎಂದು ವಿವರಿಸಿದರು. ಹಝ್ರತ್ ಪ್ರವಾದಿ ಇಬ್ರಾಹೀಂ ಹಾಗೂ ಕುಟುಂಬ ಅನುಭವಿಸಿದ ಯಾತನೆ, ದು:ಖಕ್ಕೆಲ್ಲವೂ ವಿಜಯದ ಸಿಹಿಯಾಗಿ ಕೊನೆಗೆ ಲಭಿಸಿತ್ತು. ತನ್ನ ಕರುಳ ಕುಡಿಯನ್ನು ಬಲಿ ನೀಡಬೇಕೆಂಬ ಅಲ್ಹಾ ಆಜ್ಞೆಪಾಲಿಸಿ ನಿಷ್ಟೆ ತೋರಿ ವಿಜಯಿಯಾದ ಅತಿ ಮಹತ್ತಾದ ಚರಿತ್ರೆಯು ಇತಿಹಾಸದಲ್ಲಿ ಎದ್ದು ಕಾಣುತ್ತದೆ ಎಂದು ಹೇಳಿದರು. ಮಸೀದಿಗಳಿಂದ ಗುಂಪಾಗಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಕೋರಿ ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಜಾಮೀಯ ಮಸೀದಿ ಅಧ್ಯಕ್ಷ ಯಾಕೂಬ್ ಅಹಮದ್, ಉಪಾಧ್ಯಕ್ಷ ಮಲ್ನಾಡ್ ಮೆಹಬೂಬ್, ಕಾರ್ಯದರ್ಶಿ ಮಹಮ್ಮದ್ ಫೈಝಾನ್, ಪುರಸಭೆ ಸದಸ್ಯ ಸಯ್ಯದ್ ಮಫೀಝ್, ಶಬ್ಬೀರ್ಖಾನ್, ಹಿಲಾಲಲಾ ಸಾದಿಕ್ಸಾಬ್, ಮಿಲಾಫ್ ಖಲೀಲ್, ಆಪ್ತಾಬ್ ಆಲಂ ಇತರರು ಇದ್ದರು.