ನ. 11ರಿಂದ 4 ದಿನಮಕ್ಕಳ ಹಬ್ಬ
ಹಾಸನ: ನ.11 ರಿಂದ ನ. 14 ರವರೆಗೆ ಬೀದರ್ನಲ್ಲಿ ಮಕ್ಕಳ ಹಬ್ಬ ನಡೆಯಲಿದೆ. 6 ರಿಂದ 8ನೇ ತರಗತಿವರೆಗೆ 400 ಮಕ್ಕಳು, 100 ಶಿಕ್ಷಕರು, 50 ಸಂಪನ್ಮೂಲ ವ್ಯಕ್ತಿಗಳು ಹಾಗೂ 15 ಮಂದಿ ನಾನಾ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ ಎಂದು ಬಿಜಿವಿಎಸ್ನ ಪ್ರಮುಖರಾದ ಮಮತಾ ಶಿವು ತಿಳಿಸಿದರು. ನ.11 ರಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮಕ್ಕಳ ಹಬ್ಬ ಉದ್ಘಾಟಿಸುವರು. ಕರ್ನಾಟಕ, ಮಹಾರಾಷ್ಟ್ರ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿಯಿಂದ ಆಸಕ್ತ ಮಕ್ಕಳು ಭಾಗವಹಿಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಒತ್ತಡ ಹೆಚ್ಚುತ್ತಿದೆ. ಶಾಲೆ, ಟ್ಯೂಷನ್, ರಜಾ ದಿನಗಳ ವಿಶೇಷ ತರಗತಿಗಳಲ್ಲಿ ಅವರನ್ನು ಬಂಧಿಸಿಡಲಾಗುತ್ತಿದೆ. ಟಿವಿ, ಕಂಪ್ಯೂಟರ್ ಗೇಮ್, ಇಂಗ್ಲಿಷ್ ಎಂಬ ಭ್ರಮಾಲೋಕ ಅವರನ್ನು ಸುತ್ತುವರಿದಿದೆ. ಹೊರಪ್ರಪಂಚದ ಆಗುಹೋಗುಗಳು ಅವರ ಅನುಭವದಲ್ಲಿ ದಾಖಲಾಗುತ್ತಿಲ್ಲ. ಗೆಳೆಯರು, ಪಕ್ಕದ ಮನೆಯವರೊಂದಿಗಿನ ಒಡನಾಟ, ಪರಿಸರದೊಂದಿಗಿನ ಸಂಬಂಧಗಳ ಕೊಂಡಿಗಳು ಕಳಚುತ್ತಿವೆ. ಹೋಂವರ್ಕ್ ಎಂಬ ಭೂತ ಮಕ್ಕಳ ಬಾಲ್ಯವನ್ನು ನುಂಗಿ ನೀರು ಕುಡಿಯುತ್ತಿದೆ. ಐ.ಟಿ ಎಂಬ ಮಾಯಾಕನ್ನಡಿಗೆ ಮರುಳಾಗಿ ನಮ್ಮೆಲ್ಲ ಮಕ್ಕಳನ್ನು ಅಂಕಗಳೆಂಬ ಬೇತಾಳನ ಹೆಗಲ ಸವಾರಿಗೆ ಒಪ್ಪಿಸಿದ್ದೇವೆ ಎಂದು ಶಿವು ನುಡಿದರು. ಕಲಿಕೆ ಕೇವಲ ನಾಲ್ಕು ಗೋಡೆಗಳ ನಡುವೆ ನಡೆಯುವುದಲ್ಲ. ಶಾಲೆ, ಪುಸ್ತಕಗಳ ಆಚೆಗಿನ ಅನುಭವಗಳು, ಸಾಮಾಜಿಕ ನಡುವಳಿಕೆ ಗಳು ಮಗು ಕಲಿಯುವುದಕ್ಕೆ, ಜ್ಞಾನವನ್ನು ಕಟ್ಟಿಕೊಳ್ಳುವುದಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡುತ್ತವೆ. ಇಂತಹ ಸಂದರ್ಭ ಒದಗಿಸಿದಲ್ಲಿ ಎಲ್ಲ ಮಕ್ಕಳೂ ಬೌದ್ಧಿಕವಾಗಿ ಬೆಳಯಬಲ್ಲರು ಎಂದ ಅವರು ನ.12 ರಿಂದ 14 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಹಬ್ಬವು ಮಕ್ಕಳ ದಿನಾಚರಣೆಯಂದು ಕೊನೆಗೊಳ್ಳಲಿದೆ ಎಂದು ತಿಳಿಸಿದರು. ಪ್ರತಿದಿನ ಹಬ್ಬದಲ್ಲಿ ಆಟಗಳು, ಹಾಡುಗಳು, ಚಿತ್ರ ಬರೆ, ಕಥೆ ಕವನಗಳ ರಚನೆ, ಮಾಡಿ ನೋಡು, ಮಾಡಿ ಆಡು, ಮಲ್ಲಗಂಬ ಮುಂತಾದ ಕ್ರಿಯಾಶೀಲ ಚಟುವಟಿಕೆಗಳು ನಡೆಯಲಿವೆ. ಪ್ರತಿ 50 ಮಕ್ಕಳ ಗುಂಪಿಗೆ 3-4 ಜನ ಸಂಪನ್ಮೂಲ ವ್ಯಕ್ತಿಗಳ ತಂಡ ಇದನ್ನು ನಡೆಸಲಿದೆ. ಸಾಹಿತ್ಯ, ವಿಜ್ಞಾನ ಕ್ರೀಡೆ ಮುಂತಾದ ನಾನಾ ಕ್ಷೇತ್ರಗಳ ಸಾಧಕರೊಂದಿಗೆ ಮಕ್ಕಳ ಸಂವಾದ ಏರ್ಪಡಿಸಲಾಗುವುದು. ಸ್ಥಳಿಯ ಇತಿಹಾಸ, ಐತಿಹಾಸಿಕ ಸ್ಥಳಗಳ ಭೇಟಿ ಮತ್ತು ಅಧ್ಯಯನ ಕೂಡ ಹಬ್ಬದ ಭಾಗವಾಗಿದೆ ಎಂದು ಹೇಳಿದರು. ಮಕ್ಕಳ ಚಟುವಟಿಕೆಗಳನ್ನು ನಡೆಸಲು ಸಂಪನ್ಮೂಲ ವ್ಯಕ್ತಿಯಾಗಿ ನಿಮ್ಮ ಶಾಲೆಯ ಮಕ್ಕಳೊಂದಿಗೆ ಹಬ್ಬದಲ್ಲಿ ಭಾಗವಹಿಸಬಹುದು. ಶಿಕ್ಷಕರು, ಶಿಕ್ಷಣಾಸಕ್ತರು ರಾಜ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ ತಮ್ಮ ಹಾಗೂ ಮಕ್ಕಳ ಹೆಸರು, ವಿಳಾಸ, ಉದ್ಯೋಗ ಇತ್ಯಾದಿ ಮಾಹಿತಿಯನ್ನು ಕಳುಹಿಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಿದ್ದಾರೆ. ಆಸಕ್ತ ಹಾಸನ ಜಿಲ್ಲೆಯವರು ಸಂಪರ್ಕಿಸ ಬೇಕಾದ ವಿಳಾಸ - ಮಮತ ಶಿವು, ಎಸ್.ಜಿ.ಆರ್. ಸ್ಕೂಲ್, ಉತ್ತರ-ಬಡಾವಣೆ, ಹೊಸ್ಲೈನ್ ರೋಡ್, ಹಾಸನ. ದೂ 9481492407.