ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೀದಿ ಬದಿಯ ವ್ಯಾಪಾರಿಗಳಿಗೆ ಮುಖ್ಯ ಸೂಚನೆ

Vishwanath S
Updated On : 17 Oct 2013, 12:22 pm

ಬೇಲೂರು: ಪಟ್ಟಣದ ಬೀದಿ ವ್ಯಾಪಾರಸ್ಥರು ಅಕ್ಟೋಬರ್ 18 ರೊಳಗೆ ಪುರಸಭೆಯಿಂದ ನಿಗದಿ ಮಾಡಿರುವ ಸ್ಥಳಕ್ಕೆ ಸ್ಥಳಾಂತರಿಸವಂತೆ ಪುರಸಭೆ ಮುಖ್ಯಾಧಿಕಾರಿ ಬಸವರಾಜು ತಿಳಿಸಿದ್ದಾರೆ.
 ವಿಶ್ವ ವಿಖ್ಯಾತ ಬೇಲೂರು ಪಟ್ಟಣವನ್ನು ಸುಂದರವಾಗಿ ಇರಿಸಲು ಪುರಸಭೆ ಹಲವು ಯೋಜನೆಗಳನ್ನು ರೂಪಿಸಿದ್ದು ಇದರಲ್ಲಿ ಬೀದಿಗಳಲ್ಲಿ ವ್ಯಾಪಾರ ಮಾಡುವುದನ್ನು ಸ್ಥಗಿತಗೊಳಿಸುವುದು ಪ್ರಮುಖ ಯೋಜನೆಯಾಗಿದೆ. ಅಂಬೇಡ್ಕರ್ ಭವನ ಸುತ್ತ ಪಟ್ಟಣದ ಮುಖ್ಯ ರಸ್ತೆಯ ಹೂವಿನ ಅಂಗಡಿ,ಹಣ್ಣು ತರಕಾರಿ, ಇನ್ನಿತರ ಮಾರಾಟಗಾರರಿಗೆ ಈಗಾಗಲೇ ಕಟ್ಟೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಒಂದೆಡೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿ ಐಡಿಎಸ್‌ಎಂಟಿ ಆವರಣದಲ್ಲಿ ಕಟ್ಟೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಿಲೇವಾರಿ ಮಾಡಲಾಗಿದೆ.  ಈ ಹಿನ್ನೆಲೆಯಲ್ಲಿ ಅ.18 ಶುಕ್ರವಾರದೊಳಗೆ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ನಿಲ್ಲಿಸಿ ಪುರಸಭೆ ನಿಗದಿ ಮಾಡಿರುವ ಸ್ಥಳಗಳಲ್ಲಿ ವ್ಯಾಪಾರ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ 19  ರಂದು  ಬೀದಿ ವ್ಯಾಪಾರ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
21, ನಗರಕ್ಕೆ ಸಚಿವ ಖಾದರ್ ಆಗಮನ
ಹಾಸನ: ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅ. 21ರಂದು ಹಾಸನಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಅ 22ರಂದು ಬೆಳಗ್ಗೆ 10 ಕ್ಕೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಾಸನ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 1.30ಕ್ಕೆ ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಮಠಕ್ಕೆ ಪ್ರಯಾಣ ಬೆಳೆಸುವರು.
ಅಕ್ರಮ ಮದ್ಯ ಮಾರಾಟ: ಬಂಧನ
ಅರಸೀಕೆರೆ: ಪಟ್ಟಣದ ಗೂಡ್‌ಶೆಡ್ ರಸ್ತೆಯಲ್ಲಿ ಸುಂದರಂ ವೈನ್ಸ್ ಅಂಗಡಿ ಬಳಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಸುಬ್ರಹ್ಮಣ್ಯನಗರ  ಬಡಾವಣೆಯ ಮಾರುತಿ (53) ಎಂಬಾತ ಬಂಧಿತ ಆರೋಪಿ. ಆತ ಮಾರಾಟಕ್ಕಿದ್ದ  2210 ರು. ಬೆಲೆಯ 90 ಎಂ.ಎಲ್.ನ 96 ರಾಜ ವಿಸ್ಕಿ ಸ್ಯಾಚೇಟ್ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿವ್ವಳ ಲಾಭ ಸಹಕಾರ ಶಿಕ್ಷಣ ನಿಧಿಗೆ
ಹಾಸನ: ಹಾಸನ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ 2012-13ನೇ ಸಾಲಿನಲ್ಲಿ ಬಂದ ನಿವ್ವಳ ಲಾಭದ ಶೇ.2 ರಷ್ಟು ಸಹಕಾರ ಶಿಕ್ಷಣ ನಿಧಿಯನ್ನು ರಾಜ್ಯ ಸಹಕಾರ ಮಹಾಮಂಡಳಕ್ಕೆ ಪಾವತಿಸಲಾಯಿತು.
ಸಹಕಾರ ಶಿಕ್ಷಣ ನಿಧಿ ಚೆಕ್ಕನ್ನು  ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ಬಿ. ಶ್ರೀನಿವಾಸ ಅವರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾರ್ಲೆಇಂದ್ರೇಶ್ ಅವರಿಗೆ ಮತ್ತು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ಟಿ.ದ್ಯಾವೇಗೌಡರಿಗೆ  ನೀಡಿದರು. ಆಡಳಿತ ಮಂಡಳಿ ಸದಸ್ಯರು ಹಾಗೂ ಒಕ್ಕೂಟದ ಸಿಬ್ಬಂದಿ ವರ್ಗದವರು ಇದ್ದರು.
ಸುಜಲ ಕಾಲೇಜು ತಂಡಕ್ಕೆ ಜಯ
ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ನಗರದ ಸುಜಲ ಪಿಯು ಕಾಲೇಜಿನ ವಿದ್ಯಾರ್ಥಿನಿಯರ ತಂಡ ಜಯ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ವಿಜೇತ ವಿದ್ಯಾರ್ಥಿನಿಯರನ್ನು  ಸಂಸ್ಥೆಯ ಕಾರ್ಯದರ್ಶಿ ಎಸ್. ಲೋಕೇಶ್,  ಸುಜಲ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರ್,  ಸುಜಲ ಪಿಯು ಕಾಲೇಜಿನ ಪ್ರಾಂಶುಪಾಲ ಜುಲ್ಫೀಕರ್ ಅಹಮ್ಮದ್,  ಆಡಳಿತ ಮಂಡಳಿ,  ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಶುಭ ಕೋರಿದೆ.
20 ರಿಂದ ಅಧ್ಯಯನ ಜಾಗೃತಿ ಶಿಬಿರ
ಹಾಸನ: ಭಾರತ್ ಸ್ಕೌಟ್ಸ್ ಗೈಡ್ಸ್ ರಾಷ್ಟ್ರೀಯ ಸಂಸ್ಥೆಯಿಂದ ಅ. 20 ರಿಂದ 26 ರವರೆಗೆ ಜಮ್ಮು ಕಾಶ್ಮೀರದ ಕಾಚ್ರಾದಲ್ಲಿ ಚಾರಣ ಹಾಗೂ ಪರಿಸರ ಅಧ್ಯಯನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಸನ ಜಿಲ್ಲಾ ಸಂಸ್ಥೆಯಿಂದ ಸ್ಕೌಟ್ಸ್ ಮಾಸ್ಟರ್ ಹಾಗೂ ಗೈಡ್ ಕ್ಯಾಪ್ಟನ್‌ಗಳಾದ ಪಡುವಲಹಿಪ್ಪೆಯ ಸರ್ಕಾರಿ ಪ್ರೌಢಶಾಲೆಯ  ಎಂ.ಎಸ್. ಪ್ರಕಾಶ್, ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನ ಮುತ್ತೇಗೌಡ, ಗಂಡಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಾಮೇಶ್ವರಿ, ಕುಪ್ಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದ್ಮ ವೈ.ಡಿ. ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮುಖ್ಯ ಸ್ಕೌಟ್ಸ್ ಆಯುಕ್ತ ಡಾ ವೈ.ಎಸ್. ವೀರಭದ್ರಪ್ಪ ತಿಳಿಸಿದ್ದಾರೆ.
ಅಂಬೇಡ್ಕರ್ ನಿಗಮಕ್ಕೆ ಸೇರಿಸುವ ಹುನ್ನಾರ
ಹಾಸನ: ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕವಾಗಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಇದೆ. ಆದರೆ ಈ ನಿಗಮವನ್ನು ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸೇರಿಸುವ ಹುನ್ನಾರ ಅಧಿಕಾರಿಗಳಿಂದಲೇ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ಘಟಕ ಅಧ್ಯಕ್ಷ ಚೆಲುವನಹಳ್ಳಿ ಶೇಖರಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ  ಹಾಗೂ ಪದಾಧಿಕಾರಿಗಳು ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಈಗಿರುವ ಹಾಗೆಯೇ ಪ್ರತ್ಯೇಕವಾಗಿ ಇರಬೇಕೆಂದು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಹಾಗೇ ಮುಂದುವರಿಯಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement