'ಯೋಜನೆ ಬಳಸಿಕೊಳ್ಳುವ ಇಚ್ಛಾಶಕ್ತಿ ಅಧಿಕಾರಿಗಳು, ಜನರಲ್ಲಿರಬೇಕು'
ಕ.ಪ್ರ.ವಾರ್ತೆ , ಹಳೇಬೀಡು , ಅ.16
ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳುವ ಇಚ್ಛಾಶಕ್ತಿ ಅಧಿಕಾರಿಗಳು ಮತ್ತು ಜನರಲ್ಲಿರಬೇಕು, ಆಗ ಮಾತ್ರ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ ಎಂದು ಶಾಸಕ ವೈ.ಎನ್. ರುದ್ರೇಶಗೌಡ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಮತ್ತು ಎನ್ಎಸ್ಎಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದಿಗೂ ಶೇ. 60 ರಷ್ಟು ಕಿತ್ತು ತಿನ್ನುವ ಬಡತನವಿದೆ. ಇದಕ್ಕೆ ಕಾರಣ ಸಮರ್ಪಕ ಶಿಕ್ಷಣದ ಕೊರತೆ. ಶೈಕ್ಷಣಿಕ ಕ್ರಾಂತಿ ನಮ್ಮ ದೇಶದಲ್ಲಿ ಆಗದಿದ್ದರೆ ಬಡತನ ನಿರ್ಮೂಲನೆ ಅಸಾಧ್ಯ ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಶೇಷ ಪ್ರತಿಭೆಗಳಿವೆ. ಅದನ್ನು ಹೊರ ಹಾಕಲು ಶಿಕ್ಷಣ ಅವರಿಗೆ ಮಾನದಂಡ ವಾಗಿರುತ್ತದೆ. ಇಂದಿನ ಜಾಗತೀಕರಣ ಯುಗದಲ್ಲಿ ವಿಷಯ ಸಂಯೋಜನೆಗಳು ಸಾಕಷ್ಟಿದ್ದು ಆಸಕ್ತಿ ಇರುವ ವಿಷಯಗಳನ್ನು ಆಯ್ದುಕೊಂಡು ಶ್ರದ್ಧೆಯಿಂದ ಕಲಿತರೆ ಉಜ್ವಲ ಭವಿಷ್ಯ ದೊರಕುತ್ತದೆ ಎಂದರು.
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೊಠಡಿಗಳ ಕೊರತೆ ನೀಗಿಸಲು ಒಟ್ಟು 75 ಲಕ್ಷ ರು. ಬಿಡುಗಡೆ ಮಾಡಿದ್ದು, ಈಗಿರುವ ಕಟ್ಟಡದ 2ನೇ ಮಹಡಿಯಲ್ಲಿ 4 ಕೊಠಡಿಗಳು ಮತ್ತು 4 ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಶೀಘ್ರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಎಚ್. ಸಿದ್ದೇಗೌಡ ಮಾತನಾಡಿದರು. ಪರಿಸರ ಪ್ರೇಮಿ ಸದಾಶಿವಯ್ಯ ಮಾತನಾಡಿ, ವ್ಯಕ್ತಿ ತನ್ನ ಜೀವಿತದ ಅವಧಿಯಲ್ಲಿ ಪ್ರಕೃತಿಯಿಂದ ಸಾಕಷ್ಟು ಉಪಯೋಗ ಪಡೆದುಕೊಳ್ಳುತ್ತಾನೆ. ಆದರೆ ಪ್ರಕೃತಿ ಉಳಿವಿಗೆ, ಪೋಷಣೆಗೆ ಅವನ ಕೊಡುಗೆ ಶೂನ್ಯವಾಗಿದೆ ಎಂದು ಹೇಳಿದರು.