ಗುಣಮಟ್ಟದ ಗೃಹ ಬಳಕೆ ವಸ್ತುಗಳ ಉತ್ಪಾದನೆಗೆ ಆದ್ಯತೆ
ಕ.ಪ್ರ ವಾರ್ತೆ, ಅರಕಲಗೂಡು, ಅ.18
ಸ್ವಸಹಾಯ ಸಂಘಗಳು ಹಾಗೂ ಗುಡಿ ಕೈಗಾರಿಕೋದ್ಯಮಿಗಳು ಗುಣಮಟ್ಟದ ಗೃಹ ಬಳಕೆಯ ವಸ್ತುಗಳ ಉತ್ಪಾದನೆಗೆ ಆದ್ಯತೆ ನೀಡಿದರೆ ಮಾತ್ರ ಮಾರುಕಟ್ಟೆಯಲ್ಲಿ ಮೌಲ್ಯ ಉಳಿಸಿಕೊಂಡು ಲಾಭ ಗಳಿಸಲು ಸಾಧ್ಯ ಎಂದು ಮರಿಯಾನಗರ ಚರ್ಚ್ ಧರ್ಮ ಡೇವಿಡ್ ಅಂತೋಣಪ್ಪ ತಿಳಿಸಿದರು.
ಹಾಸನದ ಸಿಎಂಎಸ್‌ಎಸ್ ಸೇವಾ ಸಂಸ್ಥೆ, ಸಮೃದ್ಧ ಸ್ವಉದ್ಯೋಗ ಸಂಸ್ಥೆ, ಜಿಪಂ, ತಾಲ್ಲೂಕು ಮಹಿಳಾ ಬಾಂಧವ್ಯ ಒಕ್ಕೂಟ, ದಿವ್ಯ ಜ್ಯೋತಿ ಮತ್ತು ಶುಭ ಜ್ಯೋತಿ ಮಹಾ ಸಂಘ, ನಿಸರ್ಗ ಮಹಿಳಾ ಸ್ವಸಹಾಯ ಸಂಘದ ಸಂಯುಕ್ತಾಶ್ರಯದಲ್ಲಿ ಹೊನಗಾನಹಳ್ಳಿಯಲ್ಲಿ ಏರ್ಪಡಿಸಿದ್ದ ಹಪ್ಪಳ ಮತ್ತು ಉಪ್ಪಿನ ಕಾಯಿ ಘಟಕ ಹಾಗೂ ಆದಾಯೋತ್ಪನ್ನ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದೇಶ ವಿದೇಶಗಳಲ್ಲಿ ತಲೆಯೆತ್ತಿರುವ ಕೆಲವು ಖಾಸಗಿ ಕಂಪನಿಗಳಿಂದು ಬಗೆ ಬಗೆಯ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಜನರನ್ನು ಮೋಡಿ ಮಾಡಿ ಲಾಭ ಗಳಿಸುತ್ತಿವೆ. ಆಧುನಿಕ ಯುಗದಲ್ಲಿ ಅಂತಹ ಕಂಪನಿಗಳ ಮುಂದೆ ಪೈಪೋಟಿ ಎದುರಿಸುವ ಸಲುವಾಗಿ ಸಣ್ಣ ಗುಡಿ ಕೈಗಾರಿಕೋದ್ಯಮಿಗಳು ಹಾಗೂ ಸ್ವ ಉದ್ಯೋಗ ಸಂಘ ಸಂಸ್ಥೆಗಳ ಸದಸ್ಯರು ಗುಣಮಟ್ಟದ ರುಚಿಕರ ಆಹಾರೋತ್ಪನ್ನ ಮತ್ತು ಗೃಹ ಬಳಕೆ ವಸ್ತುಗಳನ್ನು ಉತ್ಪಾದಿಸಿದರೆ ಮಾರುಕಟ್ಟೆಯ ಮೌಲ್ಯ ಕಾಪಾಡಿಕೊಳ್ಳಬಹುದು. ಇದರಿಂದ ಬಡತನ, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಜೊತೆಗೆ ಉತ್ತಮ ಲಾಭ ಗಳಿಸಿ ಆರ್ಥಿಕವಾಗಿ ಸಬಲರಾಗಿ ಕುಟುಂಬ ನಿರ್ವಹಣೆಗೆ ನೆರವಾಗಲಿದೆ ಎಂದು ಹೇಳಿದರು.ಕಿರು ಉದ್ದಿಮೆ ರಾಜ್ಯ ಸಂಯೋಜಕಿ ಸಿಸ್ಟರ್ ಕ್ಲೋಸಿಯಾ ಮಾತನಾಡಿ, ಸ್ವಸಹಾಯ ಸಂಘಗಳು ಉತ್ಪಾದಿಸುವ ಆಹಾರೋತ್ಪನ್ನಗಳಲ್ಲಿ ಗುಣಮಟ್ಟವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದು. ಸಂಘಗಳ ಸದಸ್ಯರು ಸಂಘಟಿತರಾಗುವ ಮೂಲಕ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಎಲ್ಲ ಸಂಘಗಳ ಸದಸ್ಯರು ತಾವು ಉತ್ಪಾದಿಸುವ ವಸ್ತುಗಳನ್ನೇ ಖರೀದಿಸಿ ಪ್ರೋತ್ಸಾಹಿಸ ಬೇಕು ಎಂದು ಮನವಿ ಮಾಡಿದರು.ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಘು ನಂದನ್, ಒಕ್ಕೂಟ ಅಧ್ಯಕ್ಷೆ ಗೀತಾ, ಜಿಲ್ಲಾ ರೈತ ಸಂಘ ಉಪಾಧ್ಯಕ್ಷ ಎಚ್.ಈ. ಜಗದೀಶ್ ಮಾತನಾಡಿದರು.