ಯಾರನ್ನೂ ಒತ್ತಾಯಿಸಿ ಹಣ ಕೇಳಿಲ್ಲ: ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸ್ಪಷ್ಟನೆ
ಕನ್ನಡಪ್ರಭ ವಾರ್ತೆ, ಹಾಸನ, ಅ.18
ಇಲ್ಲಿಯವರೆಗೂ ನಾವು ಯಾರನ್ನೂ ಒತ್ತಾಯಿಸಿ ಹಣ ಕೇಳಿಲ್ಲ. ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡು ಸ್ಥಾನ ಗಿಟ್ಟಿಸಲು ಇತರರ ಮೇಲೆ ಆರೋಪ ಮಾಡುವ ಕೆಟ್ಟ ವ್ಯಕ್ತಿಗಳಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಶ್ರೀರಾಮ ಸೇನೆಯ ಜಿಲ್ಲಾ ಘಟಕ ಸ್ಪಷ್ಟಪಡಿಸಿದೆ.
ಆರು ತಿಂಗಳಿಗೊಮ್ಮೆ ಪಕ್ಷ ಹಾಗೂ ಸಂಘವನ್ನು ಬದಲಾಯಿಸುವ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಖಜಾಂಚಿ ಅಂದಾನಿಗೌಡ ಶ್ರೀರಾಮ ಸೇನೆ ವಿರುದ್ಧ ಹೇಳಿಕೆ ಕೊಟ್ಟು ಕಾಂಗ್ರೆಸ್‌ನಲ್ಲಿ ಯಾವುದಾದರೂ ಒಂದು ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಮಾಡಿರುವ ಆರೋಪ ಇದಾಗಿದೆ. ಈಗಾಗಲೇ ಈತ ಕಾಂಗ್ರೆಸ್ ಬ್ಯಾನರ್‌ಗಳಲ್ಲಿ, ಕಾಂಗ್ರೆಸ್ ಪ್ರಮುಖ ವ್ಯಕ್ತಿಗಳ ಜತೆ ಕಾಣಿಸಿಕೊಂಡು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ಆರೋಪಿಸಿದ್ದಾರೆ.
ಶ್ರೀರಾಮಸೇನೆ ಪ್ರತಿ ವರ್ಷದಂತೆ ಉಚಿತವಾಗಿ ದತ್ತಾತ್ರೇಯ ಯಾತ್ರೆಯ ಸಲುವಾಗಿ ಭಕ್ತರಿಂದ ಭಿಕ್ಷೆ ಬೇಡಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಇಲ್ಲಿಯವರೆಗೂ ಯಾರನ್ನೂ ಒತ್ತಾಯಿಸಿ ಹಣ ಕೇಳಿಲ್ಲ. ದತ್ತಾತ್ರೇಯ ಅಂದಾನಿಗೌಡ ಅವರಿಗೆ ಹಿಂದೂ ಧರ್ಮದ ಬಗ್ಗೆ ಸದ್ಭುದ್ದಿ ಕೊಡಲೆಂದು ಪ್ರಾರ್ಥಿಸುತ್ತೇನೆ.
ಹಾಗೇ ಏನಾದರೂ ಅವರಲ್ಲಿ ಒತ್ತಾಯದಿಂದ ಹಣವನ್ನು ಕೇಳುತ್ತಿರುವ ಮಾಹಿತಿ ಇದ್ದರೆ ಮಾಧ್ಯಮದ ಮುಂದೆ ಬಹಿರಂಗಪಡಿಸಲಿ. ಅದು ಬಿಟ್ಟು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ಬಿಡಲಿ.
ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಕಚೇರಿ ಅಥವಾ ಶ್ರೀರಾಮಸೇನೆ ಪ್ರಮುಖರಿಗಾಗಲಿ ಪತ್ರ ಬರೆದು ತಿಳಿದುಕೊಂಡು ಸಾರ್ವಜನಿಕರನ್ನು ಹಾದಿತಪ್ಪಿಸುವ ಕೆಲಸವನ್ನು ಮಾಡದಿರಲಿ ಎಂದು ತಿಳಿಸಿದ್ದಾರೆ.