ರಸಋಷಿ ವಾಲ್ಮೀಕಿ ರಾಮಾಯಣದ ತತ್ವ ಇಂದಿಗೂ ಮಾದರಿ: ಕಲಾವತಿ
ಹೊಳೆನರಸೀಪುರ: ಮಹರ್ಷಿ ವಾಲ್ಮೀಕಿ ರಚಿತ ಹಿಂದೂಗಳ ಮಹಾನ್ ಗ್ರಂಥ ರಾಮಾಯಣ ಮಹಾಕಾವ್ಯದಲ್ಲಿನ ಸಾರ ತತ್ವಗಳು ಇಂದಿಗೂ ಆದರ್ಶ ಹಾಗೂ ಮಾದರಿಯಾಗಿವೆ ಎಂದು ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ ನುಡಿದರು.
ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಆಶ್ರಯದಲ್ಲಿ ಪಟ್ಟಣದಲ್ಲಿ ಶುಕ್ರವಾರ ಆಚರಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಕಲಾವತಿ ಅವರು, ಹಿಂದುಳಿದ ಜನಾಂಗದಲ್ಲಿ ಜನಿಸಿದ ವಾಲ್ಮೀಕಿ ಮಹರ್ಷಿಗಳು ರಾಮಾಯಣದಂತಹ ಮಹಾಕಾವ್ಯವನ್ನು ನಾಡಿಗೆ ನೀಡುವ ಮೂಲಕ ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಮಹಾತ್ಮರ ಜಯಂತಿ ಆಚರಿಸುವ ಉದ್ದೇಶ, ದಾರ್ಶನಿಕರ ಉನ್ನತ ಸಂದೇಶಗಳನ್ನು ಸ್ಮರಣೆ ಮಾಡುವುದೇ ಆಗಿದೆ ಎಂದು ಹೇಳಿದ ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ಅವರು, ಈ ಮಹಾನ್ ಸಾಧಕರ ಸಂದೇಶಗಳು ಹಾಗೂ ಅವರು ನಾಡಿಗೆ ನೀಡಿದ ಮಾನವೀಯ ಮೌಲ್ಯಗಳನ್ನು ಹೊಂದಿದ ಮಹಾನ್ ಕೃತಿಗಳು ಎಲ್ಲ ಕಾಲಕ್ಕೂ ಆದರ್ಶಪ್ರಾಯವಾದುದಾಗಿವೆ ಎಂದು ಅಭಿಪ್ರಾಯ ಪಟ್ಟರು.
ಪ್ರಧಾನ ಭಾಷಣ ಮಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಅವರು, ರಾಮಾಯಣಕ್ಕೆ ಸರಿಸಮನಾದ ಮಹಾಕಾವ್ಯ ಮತ್ತೊಂದಿಲ್ಲ ಎಂದ ಅವರು, ರಾಮಾಯಣ ಕಾವ್ಯ ಹಾಗೂ ವಾಲ್ಮೀಕಿ ಆದರ್ಶ ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಾಲ್ಮೀಕಿಯವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹಲವಾರು ಇಲಾಖೆಗಳ ಅಧಿಕಾರಿಗಳು ಹಾಗೂ ವಾಲ್ಮೀಕಿ ನಾಯಕ ಜನಾಂಗದ ಮುಖಂಡರು ಹಾಜರಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ವಾಲ್ಮೀಕಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನಿವೃತ್ತಿ ಅಂಚಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಜೆ.ರಂಗರಾಜು ಅವರನ್ನು ವಾಲ್ಮೀಕಿ ನಾಯಕ ಜನಾಂಗದ ಮುಖಂಡರು ಸನ್ಮಾನಿಸಿದರು. ತಾಪಂ ಅಧ್ಯಕ್ಷೆ ಪುಷ್ಪಾಗೌಡೇಗೌಡ ಅಧ್ಯಕ್ಷತೆ ವಹಿಸಿದ್ದರು.
ಎಎಸ್ಪಿ ವಿನಾಯಕ ಪಾಟೀಲ್, ಜಿಪಂ ಸದಸ್ಯೆ ಗೌರಮ್ಮ, ತಾಪಂ ಇಓ ತಮ್ಮಣ್ಣಗೌಡ, ತಾಪಂ ಉಪಾಧ್ಯಕ್ಷ ನಂಜುಡಪ್ಪ, ತಾಪಂ ಸದಸ್ಯ ಸಿ.ಆರ್.ಮಂಜುನಾಥ್, ಗೀತಮ್ಮ, ನಗರ ಠಾಣೆ ಎಸ್ಸೈ ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಎಚ್.ಎಸ್.ಸುದರ್ಶನ್, ಪುರಸಭೆ ಸದಸ್ಯ ಎಚ್.ಸಿ.ಬಸವರಾಜ್, ಲಕ್ಷ್ಮೀ, ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ಪುರಸಭೆ ಮುಖ್ಯಾಧಿಕಾರಿ ಹರೀಶ್, ಅಕ್ಷರ ದಾಸೋಹ ಅಧಿಕಾರಿ ಕುಮಾರ್, ಅಬಕಾರಿ ನಿರೀಕ್ಷಕ ದೇವರಾಜಪ್ಪ ಹಾಗೂ ವಾಲ್ಮೀಕಿ ನಾಯಕ ಜನಾಂಗದ ತಾಲೂಕು ಅಧ್ಯಕ್ಷ ವೆಂಕಟೇಶ್, ಮುಖಂಡ ಚಂದ್ರಾನಾಯಕ, ರಾಮಾನಾಯಕ, ದ್ಯಾವಪ್ಪನಾಯಕ ಇತರರು ಇದ್ದರು.