ಹಾಸನ: ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿಯನ್ನು ನೀಡಲು 5 ಜನ ಪಾರಂಪರಿಕ ವೈದ್ಯರನ್ನು ಗುರುತಿಸಲಾಗಿದೆ. ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್, ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಆಯುಷ್ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ಮಂಡ್ಯ ಜಿಲ್ಲೆಯ ನೆಲಮಂಗಲಪದ ಆದಿಚುಂಚನಗಿರಿ ಮಠದಲ್ಲಿ ಅ.21, 22 ಮತ್ತು 23 ರಂದು ನಡೆಯಲಿರುವ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ವೈದ್ಯರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿರ್ದೇಶಕ ಅನುಗನಾಳ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
1500ರಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಇದೇ ತಿಂಗಳಿನಲ್ಲಿ ರಾಷ್ಟ್ರಪತಿಯವರಿಂದ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನರಸಮ್ಮ, ಶಿವಮೊಗ್ಗ ಜಿಲ್ಲೆಯ ಶಿವಣ್ಣಗೌಡ, ಹುಬ್ಬಳಿ ಜಿಲ್ಲೆಯ ಕೃಷ್ಣಪ್ಪ ಪಡಿಸಾವಿಗೆ, ಉತ್ತರ ಕನ್ನಡ ಜಿಲ್ಲೆಯ ವಿ. ಎಸ್. ಶರ್ಮಾ ಮತ್ತು ಅರುಣಾಚಲ ಪ್ರದೇಶದ ವೈ.ಜೆ. ಲೇಗೊ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಸಮ್ಮೇಳನದಲ್ಲಿ ವಾತ ಸಂಧಿಗತರೋಗ, ಹಳೇ ನೋವುಗಳು, ಶ್ವಾಸರೋಗ, ಸ್ತ್ರೀರೋಗ, ಚರ್ಮರೋಗ, ಮದುಮೇಹ, ಹೃದ್ರೋಗ, ಶಿರೋರೋಗ, ನೇತ್ರರೋಗ, ಉದರರೋಗ, ಕಿವಿ, ಮೂಗು, ಗಂಟಲುರೋಗ, ಬಾಲರೋಗ, ನರರೋಗ ಪಾರ್ಶ್ವವಾಯು, ಮರ್ಮಚಿಕಿತ್ಸೆ ಮತ್ತು ಗ್ಯಾಸ್ಟಿಕ್, ಅಸಿಡಿಟಿ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊರಲಾಗಿದೆ. ಆಸಕ್ತ ಜಿಲ್ಲಾ ಮತ್ತು ರಾಜ್ಯ ಪಾರಂಪರಿಕ ವೈದ್ಯರು ಮತ್ತು ಸಾರ್ವಜನಿಕರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ ಮಾಹಿತಿಗಾಗಿ 9343431886 ಸಂಪರ್ಕಿಸಬಹುದು.