ಅರಕಲಗೂಡಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ
ಅರಕಲಗೂಡು: ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಮಾರಾಮಾರಿ ನಡೆದ ಘಟನೆ ಭಾನುವಾರ ಸಂಜೆ ಕೊಣನೂರು ಪಟ್ಟಣದಲ್ಲಿ ಸಂಭವಿಸಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅರಕಲಗೂಡು ಮತ್ತು ಕೊಣನೂರಿನ ಕೆಲ ಮುಸ್ಲಿಮರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಶುರುವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆದಿದೆ. ಗುಂಪು ಘರ್ಷಣೆಯಿಂದಾಗಿ ಪಟ್ಟಣದ ಗಾಂಧಿ ಚೌಕ, ಟಿಪ್ಪು ಸರ್ಕಲ್ ಸೇರಿದಂತೆ ಮುಸ್ಲಿಮರ ಕೇರಿಗಳಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸಿದರು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಕೊಣನೂರು ಪೊಲೀಸರು ತಿಳಿಸಿದ್ದಾರೆ.