ಬಾಲ ಕಾರ್ಮಿಕರ ಪತ್ತೆಗಾಗಿ ತಹಸೀಲ್ದಾರ್ ದಿಢೀರ್ ಭೇಟಿ
ಕ.ಪ್ರ.ವಾರ್ತೆ , ಆಲೂರು , ಅ.24
ಬಾಲಕಾರ್ಮಿಕರ ಪತ್ತೆಗಾಗಿ ಪಟ್ಟಣದ ಗ್ಯಾರೇಜ್‌ಗಳು, ಹೊಟೇಲ್ ಹಾಗೂ ಮುಂತಾದ ಕಡೆ ತಹಸೀಲ್ದಾರ್ ಶಾರದಾಂಬ ನೇತೃತ್ವದಲ್ಲಿ ನಾನಾ ಇಲಾಖೆಯ ಅಧಿಕಾರಿಗಳು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ(ಹಾಸನ), ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ ಹಾಗೂ ಹೊಳೆನರಸೀಪುರದ ನಾಲ್ವರು ಲೇಬರ್ ಇನ್ಸ್‌ಪೆಕ್ಟರ್‌ಗಳು ಇದ್ದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ತಹಸೀಲ್ದಾರ್ ಶಾರದಾಂಬ, 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಸೇರಿಸುವ ಪೋಷಕ ಹಾಗೂ ದುಡಿಮೆಗೆ ಸೇರಿಸಿಕೊಳ್ಳುವ ಮಾಲೀಕರು ಕಾನೂನು ರೀತ್ಯ ಶಿಕ್ಷೆಗೆ ಅರ್ಹರಾಗಿರುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಿ ಒಳ್ಳೆಯ ಪ್ರಜೆಗಳಾಗಿ ಬದುಕಲು ಅವಕಾಶ ಮಾಡಿಕೊಡಿ. ಇದನ್ನು ಬಿಟ್ಟು ಬಾಲ್ಯದಲ್ಲಿಯೇ ಕೆಲಸಕ್ಕೆ ಹಚ್ಚಿ ಮಕ್ಕಳ ಬದುಕನ್ನು ಹಾಳು ಮಾಡಬಾರದೆಂದ ಅವರು ಉದ್ದಿಮೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಂಡಲ್ಲಿ ಅಂತಹ ಮಾಲೀಕರಿಗೆ ದಂಡ ಹಾಗೂ ಜೈಲು ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದರು.
ಬಾಲಕಾರ್ಮಿಕರ ಪತ್ತೆಗಾಗಿ ತಂಡವೊಂದರ ರಚನೆಯಾಗಿದ್ದು, ಇದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು(ಹಾಸನ), ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ(ಹಾಸನ) ಹಾಗೂ ಜಿಪಂ ಉಪ ಕಾರ್ಯದರ್ಶಿಗಳು(ಹಾಸನ) ಸದಸ್ಯರಾಗಿದ್ದು ತಹಸೀಲ್ದಾರ್ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.