ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಕೋಪ ನಷ್ಟ ತಡೆಗೆ ಸನ್ನದ್ಧರಾಗಿ

Vishwanath S
Updated On : 25 Oct 2013, 12:07 pm

ಹಾಸನ: ಪ್ರಕೃತಿ ವಿಕೋಪದಿಂದ ಸಂಭವಿಸಬಹುದಾದ ಅಪಾರ ನಷ್ಟವನ್ನು ತಡೆಯಲು ಸನ್ನದ್ಧರಾಗುವಂತೆ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಕರೆ ನೀಡಿದರು.
ಜಿಲ್ಲಾ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ನಾನಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ವಿಕೋಪ ಅಥವಾ ಮಾನವ ನಿರ್ಮಿತ ಅನಾಹುತಗಳು ಸಂಭವಿಸಿದಾಗ ಅವುಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕೈಗೊಂಡು ಯೋಜನೆ ತಯಾರಿಸಿಕೊಂಡು ಕಾರ್ಯ ನಿರ್ವಹಿಸಿದಲ್ಲಿ ಪರಿಸರ ಹಾನಿ, ಪ್ರಾಣ ಹಾನಿ ಹಾಗೂ ಆಸ್ತಿ ನಷ್ಟವನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಪ್ರಕೃತಿ ವಿಕೋಪವನ್ನು ಗಂಭೀರವಾಗಿ ಪರಿಗಣಿಸಿ ಹಾನಿ ತಡೆಗಟ್ಟಲು ಪ್ರಾಮುಖ್ಯತೆ ನೀಡುವ ಮೂಲಕ ವಿಪತ್ತು ನಿರ್ವಹಣೆಗೆ ಪ್ರತಿವರ್ಷ ಯೋಜನೆ ಪರಿಷ್ಕರಣೆ ಮಾಡುತ್ತಿರಬೇಕು ಎಂದರು.
ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ಆಸಕ್ತಿ ವಹಿಸಿ ವಿಷಯಗಳನ್ನು ಮನನ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸಂಭವಿಸುವ ವಿಪತ್ತುಗಳ ನಿರ್ವಹಣೆಗೆ ಬಳಸಿಕೊಳ್ಳುವಂತೆ ತಿಳಿಸಿದರು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಬೋಧಕ ಡಾ. ಜೆ.ಆರ್. ಪರಮೇಶ್ ಮಾತನಾಡಿ, ಜಗತ್ತಿನ ಎಲ್ಲೆಡೆ ಪ್ರಕೃತಿ ವಿಕೋಪ ಸಂಭವಿಸುತ್ತಿರುತ್ತದೆ. ಎಲ್ಲಾ ದೇಶಗಳು ತಮ್ಮ ವ್ಯಾಪ್ತಿಗೆ ತಕ್ಕಂತೆ ಯೋಜನೆಗಳನ್ನು ತಯಾರಿಸಿ ವಿಪತ್ತು ನಿರ್ವಹಣೆ ನಿರ್ವಹಿಸುತ್ತಿರುತ್ತದೆ. ಭಾರತದಲ್ಲಿ ಪ್ರಕೃತಿ ವಿಕೋಪವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಸಾವು, ನೋವು ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಹಿನ್ನೆಲೆಯಲ್ಲಿ 2005ರಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗೆ ಯೋಜನೆ ತಯಾರಿಸಲಾಗುತ್ತದೆ. ಹೊಸ ಹೊಸ ವಿಕೋಪಗಳು ಸಂಭವಿಸುತ್ತಿದೆ. ಯಾರು ನಿರೀಕ್ಷಿಸಿರುವುದಿಲ್ಲ. ಇಂತಹುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಈ ಯೋಜನೆ ಸಹಕಾರಿಯಾಗಿದೆ. ವಿಕೋಪದಿಂದಾಗುವ ನಷ್ಟವನ್ನು ಹೇಗೆ ಕಡಿಮೆ ಮಾಡುವುದು ಎನ್ನುವ ಕುರಿತು ಹೆಚ್ಚಿನ ಒತ್ತು ಕೊಡುವುದು ಅವಶ್ಯವಾಗಿದೆ. ಅಪಾಯ ನಷ್ಟ, ದುರ್ಬಲತೆ ಹಾಗೂ ಸಾಮಥ್ಯಗಳ ವಿಶ್ಲೇಷಣೆಯಿಂದ ಗುರುತಿಸಲ್ಪಟ್ಟ ನಾನಾ ರೀತಿಯ ವಿಕೋಪಗಳಿಗೆ ನಿರ್ದಿಷ್ಟ ಸಂರಕ್ಷಣೆ ಯೋಜನೆಗಳನ್ನು ತಯಾರಿಸಬೇಕಾಗುತ್ತದೆ. ತಾಂತ್ರಿಕ ವಿಷಯಗಳಿಗೆ ಮಹತ್ವ ನೀಡದೆ ವಿಕೋಪ ನಿರ್ವಹಣೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಜಿಲ್ಲಾ ತರಬೇತಿ ಕೇಂದ್ರ ಉಪ ಪ್ರಾಂಶುಪಾಲ ಜೆ.ಎಸ್. ನಾಗರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement