ಹಾಸನ- ಬೆಂ. ರೇಲ್ವೆ ಮಾರ್ಗ ನಿರ್ಮಾಣ;ಅನುದಾನಕ್ಕೆ ವಾಣಿಜ್ಯ ಮಂಡಳಿ ಆಗ್ರಹ
ಕನ್ನಡಪ್ರಭ ವಾರ್ತೆ, ಹಾಸನ, ಅ.24
ಹಾಸನ ನಗರದಿಂದ ರಾಜಧಾನಿಗೆ ನೇರ ರೇಲ್ವೆ ಸಂಪರ್ಕ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕನಸಾದ ಈ ರೇಲ್ವೆ ಸಂಪರ್ಕ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಅಗತ್ಯ ಹಣ ಡುಗಡೆ ಮಾಡಿ ಆದಷ್ಟು ಬೇಗ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳ ಆಗ್ರಹಿಸಿದೆ.
ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಮಂಡಳಿ, ಈ ಕಾಮಗಾರಿ ಕುಣಿಗಲ್ವರೆಗೂ ನಡೆದಿದೆ. ರಾಜ್ಯ ಸರ್ಕಾರದ ಅನುದಾನ ಮತ್ತು ಯೋಜನೆಗೆ ಬೇಕಾಗುವ ಭೂಮಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಹೇಳಿದೆ.
2012-13ರ ಬಜೆಟ್ನಲ್ಲಿ ಬೆಂಗಳೂರು-ಮಂಗಳೂರು ರೈಲನ್ನು ಕೊಡುಗೆಯಾಗಿ ನೀಡಿದ್ದು ಹಾಗೆಯೇ ಈ ರೈಲು ಬೆಂಗಳೂರಿನಿಂದ ತಮಿಳುನಾಡು ಕೇರಳ ಮೂಲಕ ಮಂಗಳೂರನ್ನು ತಲುಪುತ್ತಿದೆ. ಈಗ ಹಲವಾರು ರೈಲುಗಳು ಕರ್ನಾಟಕದ ಪಾಲಿಗೆ ಮರೀಚಿಕೆಯಾಗಿದೆ. ಈ ರೈಲನ್ನು ಹಗಲು ಹೊತ್ತಿನಲ್ಲಿ ಹಾಸನದ ಮೂಲಕ ಓಡಿಸಿದರೆ ಜಿಲ್ಲೆಯ ಜನರಿಗೆ ಅನುಕೂಲವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ ಎಂದಿದೆ.
ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ಬಜೆಟ್ ಪ್ರಸ್ತಾಪದಂತೆ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಅರಸೀಕೆರೆ ಜಂಕ್ಷನ್ನಿಂದ ಮೈಸೂರಿಗೆ ಬೆಳಗ್ಗೆ 5-30ರಿಂದ 10-30ರವರೆಗೂ ಯಾವುದೇ ರೈಲಿನ ಸಂಚಾರವಿಲ್ಲ. ಬೆಳಗ್ಗೆ ಅರಸೀಕೆರೆಯನ್ನು 7 ಗಂಟೆಗೆ ಬಿಟ್ಟು ಹಾಸನ 8-05 ನಿಮಿಷಕ್ಕೆ ಬಂದರೆ ನಂತರ 10-30ಕ್ಕೆ ಮೈಸೂರು ತಲುಪಿದರೆ, ಈ ಭಾಗದ ಜನರಿಗೆ ಅತ್ಯಂತ ಹೆಚ್ಚಿನ ಉಪಯೋಗವಾಗುತ್ತದೆ. ಪ್ರಯಾಣ ದರವೂ ಸಹ ಕಡಿಮೆಯಿರುವುದರಿಂದ ಶ್ರೀಸಾಮಾನ್ಯನಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಮಧ್ಯಾಹ್ನ 3-30 ಅಥವಾ 4 ಗಂಟೆಗೆ ಮೈಸೂರನ್ನು ಬಿಟ್ಟು ಸಂಜೆ 7 ಗಂಟೆಗೆ ಅರಸೀಕೆರೆ ತಲುಪಿದರೆ ಹುಬ್ಬಳ್ಳಿ, ದಾವಣಗೆರೆ ಮತ್ತು ಶಿವಮೊಗ್ಗದ ಕಡೆಗೆ ಪ್ರಯಾಣಿಸುವ ಜನರಿಗೆ ಅತ್ಯಂತ ಅನುಕೂಲವಾಗುವುದು ಎಂದು ಹೇಳಿದೆ.
ಹಾಸನ ಜಂಕ್ಷನ್ನಿಂದ ಬೆಳಗ್ಗೆ 5-30ಕ್ಕೆ ಹೊರಟು ಅರಸೀಕೆರೆ ಮೂಲಕ ಬೆಂಗಳೂರಿಗೆ ಹೋಗುವ ರೈಲಿಗೆ ಬೋಗಿಗಳನ್ನು ಜೋಡಣೆ ಮಾಡಿದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಬೆಂಗಳೂರು ಸೇರಬಹುದು. ನಗರದ ಹೃದಯ ಭಾಗದಲ್ಲಿ ಹೊಸ ಬಸ್ ನಿಲ್ದಾಣವಿದ್ದು ಅಲ್ಲಿ ರೇಲ್ವೆ ಗೇಟ್ ಇರುವುದರಿಂದ ಸಾರ್ವಜನಿಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರೇಲ್ವೆ ಗೇಟ್ ಹಾಕಿದಾಗ ಎನ್.ಆರ್. ವೃತ್ತದವರೆಗೂ ಟ್ರಾಫಿಕ್ ಜಾಮ್ ಆಗುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಆದಷ್ಟು ಬೇಗ ಫ್ಲೈ ಓವರ್ ನಿರ್ಮಿಸಬೇಕು. ಅರಸೀಕೆರೆ, ಹಾಸನ, ಹೊಳೆನರಸೀಪುರ, ರೈಲು ನಿಲ್ದಾಣಗಳ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದೆ.
ಇತಿಹಾಸ ಪ್ರಸಿದ್ಧ ಸ್ಥಳವಾದ ಬಿಜಾಪುರ- ಯಶವಂತಪುರಕ್ಕೆ ಹೋಗುವ ರೈಲಿಗೆ ಬೋಗಿಗಳನ್ನು ಮೈಸೂರಿಗೆ ಹೋಗುವ ರೈಲಿಗೆ ಜೋಡಿಸಿದರೆ, ಎರಡೂ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಸಾರ್ವಜನಿಕರು ಸುಲಭವಾಗಿ ನೋಡಲು ಅನಕೂಲವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದಿದೆ.