ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಂದಾಚಾರ ಮೈಗೂಡಿಸಿಕೊಳ್ಳದ ಆರ್ಯ ವೈಶ್ಯ ಸಮಾಜ

Vishwanath S
Updated On : 27 Oct 2013, 12:13 pm

ಹೊಳೆನರಸೀಪುರ: ಆರ್ಯ ವೈಶ್ಯ ಸಮುದಾಯ ಕಂದಾಚಾರ ಮೈಗೂಡಿಸಿಕೊಂಡಿರುವ ಸ್ವಾರ್ಥ ಸಮುದಾಯವಲ್ಲ ಎಂದು ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.
   ಶನಿವಾರ ನೂರು ವರ್ಷ ಪೂರೈಸಿರುವ ಪಟ್ಟಣದ  ವಾಸವಾಂಬ ಕೋ ಆಪರೇಟೀವ್ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಇಲ್ಲಿನ ಆರ್ಯವೈಶ್ಯ ಸಮುದಾಯದವರು 100 ವರ್ಷಗಳ ಹಿಂದೆಯೇ ಸಮಾಜಮುಖಿಯಾಗಿ ಸಹಕಾರಿ ಮನೋಭಾವದೊಂದಿಗೆ ಆರಂಭಿಸಿದ ಸಂಸ್ಥೆ ಇಂದು ಉನ್ನತ ಮಟ್ಟದ ಬ್ಯಾಂಕಾಗಿ ಎಲ್ಲ ವರ್ಗಕ್ಕೂ ಸಹಕಾರಿಯಾಗಿ ಸಾಕಾರಗೊಂಡಿರುವುದು ಶ್ಲಾಘನೀಯ ಸಂಗತಿ ಎಂದು ನುಡಿದರು.
  100 ವರ್ಷಗಳ ಹಿಂದೆಯೇ ಸಾಮಾಜಿಕ ಚಿಂತನೆಗಳೊಂದಿಗೆ ಸಮಾಜಕ್ಕೆ ಕೊಡುಗೆಯಾಗುವ ಉದಾತ್ತ ಧ್ಯೇಯಗಳನ್ನು ಹೊಂದಿ ಆರಂಭಿಸಿದ ಸಹಕಾರಿ ಸಂಸ್ಥೆ ಅಂದು ಸಂಸ್ಥೆಯನ್ನು ಆರಂಭಿಸಿದ ಹಿರಿಯರ ಆಶೋತ್ತರಗಳನ್ನು ಪೂರೈಸುವಲ್ಲಿ ಯಶಸ್ಸನ್ನು ಕಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
  ಇಂದಿನ ದಿನಗಳಲ್ಲಿ ಸಹಕಾರಿ ಸಂಘ ಸಂಸ್ಥೆಗಳನ್ನು ನಡೆಸುವುದು ಕಷ್ಟಕರವಾದ ಕಾರ್ಯ. ಆದರೂ ನೂರು ವರ್ಷಗಳ ಅವಧಿಯಲ್ಲಿ ಯಾವ ಕಾರಣಕ್ಕೂ ನ್ಯಾಯಾಲಯದ ಮೆಟ್ಟಿಲೇರದೇ, ಸಂಸ್ಥೆಯನ್ನು ಸುದೀರ್ಘವಾಗಿ ಸಮಾಜಮುಖಿಯಾಗಿ ತಂದಿರುವುದು ಸಂಸ್ಥೆಯ ಎಲ್ಲ ಸದಸ್ಯರ ಒಗ್ಗಟ್ಟನ್ನು ಬಿಂಬಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  ಬ್ಯಾಂಕ್ ಮುಂದಿನ ದಿನಗಳಲ್ಲೂ ಬಡವರು, ಇಲ್ಲದವರು ಹಾಗೂ ಅಶಕ್ತರ ನೆರವಿಗೂ ಸ್ಪಂದಿಸುವ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಶತಮಾನೋತ್ಸವ ನೆನಪಿಗಾಗಿ ಅರಕಲಗೂಡಿನಲ್ಲಿ ಆರಂಭಿಸಲಿರುವ ನೂತನ ಶಾಖೆಗೆ ಶಂಕರಮೂರ್ತಿ ಚಾಲನೆ ನೀಡಿದರು.
  ಸಮಾರಂಭದಲ್ಲಿ ಶಾಸಕ ಎಚ್.ಡಿ.ರೇವಣ್ಣ, ಸಿಜೆಸಿ1010 ನಗದು ಪತ್ರಗಳನ್ನು ಬಿಡುಗಡೆಗೊಳಿಸಿ, ರಾಜ್ಯದಲ್ಲಿ ಬ್ಯಾಂಕ್‌ಗಳ ಸ್ಥಾಪನೆಯಾದಾಗ ಕೇವಲ 10 ಬ್ಯಾಂಕ್‌ಗಳಿದ್ದವು. ಅವುಗಳಲ್ಲಿ ಹೊಳೆನರಸೀಪುರದ ಆರ್ಯವೈಶ್ಯ ಜನಾಂಗದವರು ಆರಂಭಿಸಿದ ವಾಸವಾಂಬ ಸಹಕಾರಿ ಸಂಸ್ಥೆಯೂ ಒಂದು ಎಂಬುದು ಹೆಮ್ಮೆಯ ಸಂಗತಿ ಎಂದ ಅವರು, ಸಹಕಾರಿ ಮನೋಭಾವದೊಂದಿಗೆ ಉನ್ನತ ಕಾರ್ಯಗಳನ್ನು ಕೈಗೊಂಡಿರುವ ಈ ರೀತಿಯ ಸಹಕಾರಿ ಬ್ಯಾಂಕನ್ನು ರಾಜ್ಯ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದಲ್ಲಿ ಇನ್ನಿತರ ಸಹಕಾರಿ ಬ್ಯಾಂಕುಗಳಿಗೂ ಆದರ್ಶವಾಗಲಿದೆ ಎಂದು ಹೇಳಿದರು.
  ಆರ್ಯವೈಶ್ಯ ಜನಾಂಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಅವರು, ಮತಗಳಿಕೆಯೊಂದನ್ನೇ ಗಮನದಲ್ಲಿರಿಸಿಕೊಂಡು ರಾಜಕೀಯ ಮಾಡದೆ, ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಎಲ್ಲ ಸಮುದಾಯಗಳನ್ನೂ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮುಂದಾಗುವಂತೆ ರೇವಣ್ಣ ಸಲಹೆ ನೀಡಿದರು.
  ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಶತಮಾನೋತ್ಸವ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದಿವ್ಯಸಾನ್ನಿದ್ಯ ವಹಿಸಿದ್ದ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡುತ್ತಾ, ಅಧಿಕಾರ ದಾಹ ಮತ್ತು ಹಣದ ವ್ಯಾಮೋಹಗಳು ನಮ್ಮೊಳಗಿನ ಉನ್ನತ ಧ್ಯೇಯಗಳನ್ನು ನಾಶಮಾಡುತ್ತವೆ. ಆದ್ದರಿಂದ ಇವುಗಳನ್ನು ತೊರೆದಲ್ಲಿ ಯಾವುದೇ ಸಂಘ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಏರಬಲ್ಲದು ಎಂದು ಹೇಳಿದರು.
  ಸಭಾ ಕಾರ್ಯಕ್ರಮಕ್ಕೆ ಮುನ್ನ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರನ್ನು  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಸ್ವಾಗತಿಸಲಾಯಿತು.  ನಂತರ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ನಿವೃತ್ತ ನೌಕರರನ್ನು  ಸನ್ಮಾನಿಸಲಾಯಿತು.
  ಬ್ಯಾಂಕಿನ ಅಧ್ಯಕ್ಷ ಕೆ.ಶ್ರೀಧರ್, ಶತಮಾನೋತ್ಸವ ಸಮಿತಿ ಅಧ್ಯಕ್ಷ, ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ  ಎ.ಆರ್.ರವಿಕುಮಾರ್, ಜಿಲ್ಲಾ ಸಹಕಾರ ಸಂಘಗಳ ಉಪ-ನಿಬಂಧಕ  ಇಲ್ಯಾಸ್ ಉಲ್ಲಾ ಷರೀಫ್, ಬ್ಯಾಂಕಿನ ಉಪಾಧ್ಯಕ್ಷ ಎನ್.ಜಿ.ಮುಕುಂದ, ಬ್ಯಾಂಕಿನ ವ್ಯವಸ್ಥಾಪಕ ಎಸ್.ಆರ್.ಮೂರ್ತಿ, ನಿರ್ದೇಶಕ  ಆರ್.ಎಸ್.ಸುಬ್ಬುಲಕ್ಷ್ಮಿ, ಎಸ್.ಲಕ್ಷ್ಮಿ, ಕೆ.ಎಸ್.ಭರತ್‌ಕುಮಾರ್, ಎನ್.ಗೌತಮ್, ವಿ.ಎ.ಕೃಷ್ಣ, ಜಿ.ನಟರಾಜ್, ಕೆ.ಜಿ.ಸುರೇಂದ್ರಗುಪ್ತ, ಎ.ಎನ್.ರಮೇಶ್‌ಬಾಬು, ಆರ್.ಅನಂತಕೃಷ್ಣ, ಪಿ.ವಿ.ಎನ್ ನರಸಿಂಹ ಪ್ರಸಾದ್, ಸಮಾಜಬಾಂಧವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement