'ಕೂಲಿಗಾಗಿ ವಲಸೆ ತಡೆಯಲು ಖಾತ್ರಿ ಯೋಜನೆ ಪೂರಕ'
ಕನ್ನಡಪ್ರಭ ವಾರ್ತೆ , ಜಾವಗಲ್ , , ಅ.26
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಡ ಕುಟುಂಬಗಳಿಗೆ ಜೀವನಾಧಾರವಾಗಿದ್ದು, ಕೂಲಿಗಾಗಿ ವಲಸೆ ಹೋಗುವುದನ್ನು ತಡೆಗಟ್ಟಲು ಪೂರಕವಾಗಿದೆ ಎಂದು ಅರಸೀಕೆರೆ ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಜಾವಗಲ್ ಗ್ರಾಮ ಪಂಚಾಯ್ತಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಎಂಜಿಎನ್ಆರ್ಇಜಿ ಯೋಜನೆಯ ಅರ್ಧ ವಾರ್ಷಿಕ ಅವಧಿಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕವಾಗಿ ಸಾಕಷ್ಟು ಉಪಯುಕ್ತ ಕಾರ್ಯಕ್ರಮಗಳಿದ್ದು, ಅರ್ಹ ಫಲಾನುಭವಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅತಿಸಣ್ಣ ರೈತರಿಗೆ ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ಪಶುಪಾಲನೆ, ಜಲಾನಯನ ಅಭಿವೃದ್ಧಿ ಇಲಾಖೆಗಳಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ವೆಚ್ಚದ ಮಿತಿ ಇರುವುದಿಲ್ಲ ಹಾಗೂ ಯೋಜನೆಯಲ್ಲಿ ಹಣದಕೊರತೆ ಇರುವುದಿಲ್ಲ ಎಂದರು. ಸಾಮಾಜಿಕ ಪರಿಶೋಧನಾ ಗ್ರಾಮ ಸಂಪನ್ಮೂಲ ವ್ಯಕ್ತಿ ಪುನೀತ್ ವರದಿ ಮಂಡಿಸಿ ಮಾತನಾಡಿ, ಯೋಜನೆಯ ಅವಧಿಯಲ್ಲಿ 19ರಲ್ಲಿ ಪೈಕಿ 5 ಕಾಮಗಾರಿಗಳು ಪೂರ್ಣಗೊಂಡಿದ್ದು ಕಾಮಗಾರಿಯಲ್ಲಿ ಅಳತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವುದು, ಜಾಬ್ಕಾರ್ಡ್ ಕಡ್ಡಾಯವಾಗಿ ನಮೂದಿಸುವುದು, ಕಾಮಗಾರಿ ಸ್ಥಳದಲ್ಲಿ 50 ಸಾವಿರ ರು.ಗೆ ಮೇಲ್ಪಟ್ಟ ಕಾಮಗಾರಿಗಳಿಗೆ ಸಂಬಂಧಿಸಿದ ಅಂದಾಜು ವೆಚ್ಚ, ಖರ್ಚಿನ ವಿವರವನ್ನು ಒಳಗೊಂಡ ನಾಮಫಲಕವನ್ನು ಹಾಕುವಂತೆ ಸೂಚಿಸಿದರು.
ಪಿಡಿಓ ಚಂದ್ರಶೇಖರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕವಿತಮಂಜುನಾಥ್ ಉದ್ಘಾಟಿಸಿದರು. ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್, ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯ ಪ್ರಭಾಕರ, ಪರಮೇಶ, ಕುಮಾರಶೆಟ್ಟಿ, ಸಿದ್ದಮ್ಮ, ಮಂಜುಳ, ಸಂಪನ್ಮೂಲ ವ್ಯಕ್ತಿಗಳಾದ ಜೆ.ಎಸ್. ಜೀವನ್, ಬಿ.ಎಸ್. ರವಿ, ಗ್ರಾಪಂ ಲೆಕ್ಕಪತ್ರ ಸಹಾಯಕ ಮಲ್ಲೇಶಪ್ಪ ಇನ್ನೂ ಮೊದಲಾದವರು ಇದ್ದರು.