ಗೊರೂರಲ್ಲಿ ಮಲೆನಾಡು ವಲಯ ಮಹಿಳಾ ಕಬಡ್ಡಿ ಪಂದ್ಯಾವಳಿ
ಗೊರೂರು (ಹಾಸನ ತಾ.): ಪ್ರಸಕ್ತ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ಮಲೆನಾಡು ವಲಯದ ಮಹಿಳಾ ಕಬಡ್ಡಿ ಪಂದ್ಯಗಳನ್ನು ಗೊರೂರಿನ ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಮಹಿಳಾ ಕಬಡ್ಡಿ ಪಂದ್ಯಗಳ ಸಂಘಟಕ ಎಚ್.ವೆಂಕಟೇಶ್ ಮಲೆನಾಡು ವಲಯ ಕ್ರೀಡೆಗಳ ಬಗ್ಗೆ ಮತ್ತು ಮಹಿಳಾ ಕಬಡ್ಡಿ ಪಂದ್ಯಗಳ ಬಗ್ಗೆ ವಿವರಿಸಿದರು.
ಯೋಗಾನರಸಿಂಹಸ್ವಾವು ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎ.ಜಿ. ರಾಮನಾಥ್ ಪಂದ್ಯಾವಳಿ ಉದ್ಘಾಟಿಸಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದೆಂದರು.
ಮುಖ್ಯ ಅತಿಥಿ ಗೊರೂರಿನ ಹೇಮಾವತಿ ಪವರ್ ಅಂಡ್ ಲೈಟ್ಸ್ನ ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ.ಎ. ವೇಣುಗೋಪಾಲ್ ಮಾತನಾಡಿ, ಎ.ಎನ್.ವಿ ಕಾಲೇಜು ಯಾವುದೇ ನಗರದ ಕಾಲೇಜುಗಳಿಗೆ ಕಡಿಮೆಯಿಲ್ಲದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡಿ ಪಠ್ಯ ಮತ್ತು ಪಠ್ಯೇತರ ವಿಭಾಗಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಪ್ರಜೆಗಳಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.
ಮುಖ್ಯ ಅತಿಥಿ ಗೊರೂರಿನ ಕಾರ್ಪೋರೇಷನ್ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ರವೀಂದ್ರ ಎಸ್. ಜೋಶಿ ಮಾತನಾಡಿ, ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಮಹಿಳಾ ಕ್ರೀಡೆಗಳು ನಡೆಸುವುದು ಬಹಳ ಕಷ್ಟಕರವಾದ ವಿಚಾರವಾದರೂ ಎ.ಎನ್.ವಿ. ಕಾಲೇಜು ಮಲೆನಾಡು ವಲಯದ ಮಹಿಳಾ ಕಬಡ್ಡಿ ಪಂದ್ಯಗಳನ್ನು ನಡೆಸುತ್ತಿರುವುದು ಬಹಳ ಸಂತೋಷದ ವಿಷಯ. ಕ್ರೀಡೆಗಳಲ್ಲಿ ಗೆಲುವೇ ಮುಖ್ಯವಲ್ಲ, ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ನುಡಿದರು.
ಪಂದ್ಯಗಳಲ್ಲಿ ವಿಜೇತರಾದವರಿಗೆ ಗೊರೂರಿನ ಕಾರ್ಪೋರೇಷನ್ ಬ್ಯಾಂಕ್ನ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು. ಬೇಲೂರಿನ ತಂಡ ಶಾಂತಲಾ ಪ್ರಥಮ ದರ್ಜೆ ಕಾಲೇಜು ಹಾಗೂ ಬೇಲೂರಿನ ವೈಡಿ.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೊದಲ ಎರಡು ಸ್ಥಾನಗಳನ್ನು ಕ್ರಮವಾಗಿ ಪಡೆದವು. ಗೊರೂರಿನ ಎ.ಎನ್.ವಿ. ಕಾಲೇಜು ತಂಡ ತೃತೀಯ ಸ್ಥಾನವನ್ನು ಪಡೆಯಿತು.
ಮೈಸೂರು ವಿಶ್ವವಿದ್ಯಾನಿಲಯ ಮಲೆನಾಡು ವಲಯ ಕ್ರೀಡೆಗಳ ಸಂಚಾಲಕ ಟಿ.ಆರ್. ಮಹೇಂದ್ರ ಕುಮಾರ್, ಕಾಲೇಜಿನ ಸಿಬ್ಬಂದಿ ಇದ್ದರು. ಎ.ಎಸ್. ಕೃಷ್ಣ ಸ್ವಾಗತಿಸಿದರು. ಎಲ್.ಬಿ. ಕೇಶವಮೂರ್ತಿ ವಂದಿಸಿದರು. ಯಶವಂತ ಕುಮಾರ್ ನಿರೂಪಿಸಿದರು.