ಜನಸಾಗರ ನಡುವೆ ಮುಂದುವರಿದ ಗಣೇಶೋತ್ಸವ
ಕ.ಪ್ರ.ವಾರ್ತೆ , ಅರಸೀಕೆರೆ , ಅ. 26
ಪಟ್ಟಣದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ಪ್ರಸಿದ್ಧ ಗಣೇಶೋತ್ಸವ ಮೆರವಣಿಗೆ 2ನೇ ದಿನವಾದ ಶನಿವಾರವೂ ಶಾಂತಿಯುತವಾಗಿ ಸಡಗರ ಸಂಭ್ರಮದಿಂದ ಜನಸಾಗರದ ನಡುವೆ ಮುಂದುವರೆದಿದೆ.
ಇದೇ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ವೈ.ಎಸ್.ವಿ.ದತ್ತ ಹಾಗೂ ಮಾಜಿ ಸಚಿವ ಬಿ.ಶಿವರಾಂ ಆಗಮಿಸಿ ಭಕ್ತಿ ಸಮರ್ಪಿಸಿದರು.
ಶನಿವಾರ ಬೆಳಗ್ಗೆ ಶ್ಯಾನುಭೋಗರ ಬೀದಿ, ಸಾಯಿನಾಥ ರಸ್ತೆ, ಕರಿಯಮ್ಮನಗುಡಿ ಬೀದಿ, ಲಕ್ಷ್ಮೀಪುರ, ರಂಗೇಗೌಡರ ಬೀದಿ, ಸುಭಾಷ್ನಗರ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ನೆರೆದಿದ್ದ ಸದ್ಭಕ್ತರು ಮಹಾಮಂಗಳಾರತಿ ಮಾಡುವ ಮೂಲಕ ಭಕ್ತಿ ಸಲ್ಲಿಸಿದರು. ರಾಷ್ಟ್ರೀಯ ಹೆದ್ದಾರಿ ಮೂಲಕ ಕಂತೇನಹಳ್ಳಿ ಕೆರೆಯತ್ತ ಮೆರವಣಿಗೆ ಸಾಗಿದ್ದು ರಾತ್ರಿ 7 ಗಂಟೆಗೆ ಗಣಪತಿ ವಿಸರ್ಜನೆಯಾಗಲಿದೆ.
ಉತ್ಸವದಲ್ಲಿ ವೀರಭದ್ರನ ಕುಣಿತ, ಮಡಿಕೇರಿ ಟ್ಯಾಬ್ಲೋ, ತಮಿಳುನಾಡಿನ ತಂಜಾವೂರು ನಾಯಂಡಿ ಗ್ರೂಪ್ ವತಿಯಿಂದ ಆಯೋಜಿಸಿರುವ ಆಕರ್ಷಕ ಕೀಲುಕುದುರೆ, ನಾಯಂಡಿ ಮೇಳ, ರೋಡ್ ಆರ್ಕೆಸ್ಟ್ರಾ, ಕರಡೇವಾದ್ಯ, ವೀರಭದ್ರದೇವರ ಕುಣಿತ, ವೀರಗಾಸೆ ನೃತ್ಯ, ಅಣ್ಣಮ್ಮದೇವಿ ತಮಟೆವಾದ್ಯ, ನಂದಿಧ್ವಜ ಪೂಜಾ ಕುಣಿತ, ಮಂಗಳೂರಿನ ಯಕ್ಷಗಾನ ಸೇರಿದಂತೆ ಅನೇಕ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಶುಕ್ರವಾರ ಗಣೇಶೋತ್ಸವ ಚಾಲನೆ ವೇಳೆ ಮುಸ್ಲಿಂ ಜಮಾತ್ ಸಮಿತಿ ಮುಖ್ಯಸ್ಥರು ಆಗಮಿಸಿ ಮೆರವಣಿಗೆ ನಿರ್ವಿಘ್ನವಾಗಿ ಸಾಗಲಿ ಎಂದು ಹಾರೈಸಿ ಬೃಹದಾಕಾರದ ಹಾರವನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು. ಶನಿವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಿಂದೂ ಮುಸ್ಲಿಂ ಲೋಡರ್ ಮಜ್ದೂರ್ ಜೂನಿಯನ್ ವತಿಯಿಂದ ಗಣಪತಿಗೆ ಭಾರಿ ಗಾತ್ರದ ಹಾರ ಸಮರ್ಪಿಸಿದ್ದು ವಿಶೇಷವಾಗಿತ್ತು. ಅಲ್ಲದೇ ಅಂಗಡಿಯ ಪ್ರತಿ ವರ್ತಕರೂ ವಿಶೇಷ ಪೂಜೆ ಸಲ್ಲಿಸಿದರು. ಮೆರವಣಿಗೆಯ ನೇತೃತ್ವ ವಹಿಸಿರುವ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಉತ್ಸವ ಆರಂಭದಿಂದ ಕಂತೇನಹಳ್ಳಿ ಕೆರೆ ತಲುಪುವವರೆಗೆ ಪ್ರತಿ ಹಂತದಲ್ಲಿ ನಿಗಾ ವಹಿಸಿ ಹೋದ ಬಾರಿ ಆದಂತಹ ಅಚಾತುರ್ಯ ಘಟನೆಗಳು ನಡೆಯದಂತೆ ಜಾಗರೂಕತೆ ವಹಿಸಿ ಹಗಲು ರಾತ್ರಿಯೆನ್ನದೆ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಗಣಪತಿ ಮೆರವಣಿಗೆ ಬಂದಾಗ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಉದ್ಯಮಿ ಅರುಣಕುಮಾರ್, ಮುರುಂಡಿ ಶಿವಯ್ಯ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು. ಮಾಜಿ ಸಚಿವ ಬಿ ಶಿವರಾಂ ಇದೇ ವೇಳೆಗೆ ಆಗಮಿಸಿ ವಿಶೇಷ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜೀಗೆರೆ ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಪಟೇಲ್ಶಿವಪ್ಪ, ಯುವ ಮುಖಂಡ ದಂದೂರು ರವಿ, ಜಿ.ಟಿ.ಎಸ್.ಗೌಸ್ಖಾನ್, ಜಮೀಲ್, ಮಂಜು, ಸುನೀಲ್, ಇನ್ನಿತರರು ಅವರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು.