'ತೀರ್ಪುಗಳ ಮೌಲ್ಯ ಎತ್ತಿ ಹಿಡಿಯುವ ಹೊಣೆ ನ್ಯಾಯಾಧೀಶರ ಮೇಲಿದೆ'
ಕ.ಪ್ರ.ವಾರ್ತೆ , ಹೊಳೆನರಸೀಪುರ , ಅ.26
ನ್ಯಾಯ ಸಮ್ಮತ ತೀರ್ಪುಗಳ ಮೂಲಕ ದೇಶದ ಜನರ ನಂಬಿಕೆ ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿಯುವ ಗುರುತರವಾದ ಹೊಣೆ ನ್ಯಾಯಾಧೀಶರ ಮೇಲಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ವಿ.ಗೋಪಾಲಗೌಡ ಹೇಳಿದರು.
ಅವರು ಇಲ್ಲಿನ ನ್ಯಾಯಾಲಯ ಆವರಣದಲ್ಲಿರುವ 120 ವರ್ಷಗಳಷ್ಟು ಹಳೆಯದಾದ ನ್ಯಾಯಾಲಯ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು ಮಾತನಾಡಿದರು.
ನ್ಯಾಯಾಂಗ-ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಈ ಸಮಾಜ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದು, ಅದರಲ್ಲಿಯೂ ದೇಶದ ಏಳಿಗೆಗೆ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ವಕೀಲರು ಮಾನವೀಯ ವಿಜ್ಞಾನಿಗಳಾಗಿ ಸಮಾಜದಲ್ಲಿನ ವ್ಯವಸ್ಥೆಯನ್ನು ಮೌಲ್ಯಯುತವಾಗಿ ಉಳಿಸುವ ನಿಟ್ಟಿನಲ್ಲಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ನ್ಯಾಯವು ಎಲ್ಲರಿಗೂ ನ್ಯಾಯಸಮ್ಮತವಾಗಿ ಹಾಗೂ ಸಮಾನವಾಗಿ ದೊರೆತಾಗ ಮಾತ್ರವೇ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗಬಲ್ಲದು. ವಕೀಲರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯ-ಮಾನವ ಮತ್ತು ನಿಸರ್ಗ ಸಂಬಂಧಗಳು, ಸಂವಿಧಾನ ಮತ್ತು ಸಂವಿಧಾನದಲ್ಲಿನ ತಾತ್ಪರ್ಯಗಳು, ಮೂಭೂತ ಹಕ್ಕು ಮತ್ತು ಕರ್ತವ್ಯಗಳು, ನಿರ್ದೇಶಕ ತತ್ವಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚಾಗಿ ನ್ಯಾಯಾಂಗ ವ್ಯವಸ್ಥೆ ಮತ್ತು ಅದರ ಹಕ್ಕು ಮತ್ತು ಬಾಧ್ಯತೆಗಳ ಕುರಿತಾಗಿ ಹೆಚ್ಚಿನ ಜ್ಞಾನಾರ್ಜನೆಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಅವರು ತಮ್ಮ ಭಾಷಣದುದ್ದಕ್ಕೂ ಮಹಿಳೆಯರು ಮತ್ತು ಅವರ ಸ್ಥಿತಿ-ಗತಿಗಳು, ಮಹಿಳೆಯರ ಕುರಿತಾದ ಹಕ್ಕುಗಳು ಅವುಗಳ ವಸ್ತುಸ್ಥಿತಿ, ಇಂದಿನ ಸಮಾಜದಲ್ಲಿ ಮಹಿಳೆಯರ ಪಾತ್ರ, ಈ ನಿಟ್ಟಿನಲ್ಲಿ ನ್ಯಾಯವಾದಿಗಳ ಗುರುತರವಾದ ಪಾತ್ರದ ಕುರಿತಾಗಿ ಮಾರ್ಮಿಕವಾಗಿ ಹಾಗೂ ಮಾನವೀಯ ಮೌಲ್ಯಗಳ ನೆಲೆಗಟ್ಟಿನಡಿಯಲ್ಲಿ ಸಮಾಜ ವಹಿಸಬೇಕಾಗಿರುವ ಪಾತ್ರದ ಕುರಿತಂತೆ ವಿವರಿಸಿದರು.
ಕೇಂದ್ರದ 13 ನೇ ಹಣಕಾಸು ಆಯೋಗವು ದೇಶದಲ್ಲಿನ ಹಳೆಯದಾದ ನ್ಯಾಯಾಲಯಗಳ ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳಾಗಿ ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿನ 120 ವರ್ಷಗಳಷ್ಟು ಹಳೆಯದಾದ ನ್ಯಾಯಾಲಯ ಕಟ್ಟಡವನ್ನು 60 ಲಕ್ಷ ರು. ಗಳ ವೆಚ್ಚದಲ್ಲಿ ನವೀಕರಿಸಲಾಗುವುದು ಎಂದು ತಿಳಿಸಿದರಲ್ಲದೇ, ಇಲ್ಲಿನ ನ್ಯಾಯಾಲಯಕ್ಕೆ ಹಿರಿಯ ಮತ್ತು ಕಿರಿಯ ವಕೀಲರುಗಳಿಗೆ ಸಹಾಯಕವಾಗುವಂತೆ ಸುಸಜ್ಜಿತವಾದ ಗ್ರಂಥಾಲಯ ಸ್ಥಾಪಿಸಲು ಸ್ಥಳೀಯ ಶಾಸಕ ಎಚ್.ಡಿ.ರೇವಣ್ಣ ಸಹಕರಿಸುವಂತೆ ತಿಳಿಸಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ರಾಜ್ಯದಲ್ಲಿನ ಎಲ್ಲಾ ನ್ಯಾಯಾಲಯಗಳಿಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಸರ್ಕಾರ ಸಮರ್ಪಕವಾಗಿ ಸ್ಪಂಧಿಸುವ ಅವಶ್ಯಕತೆ ಇದೆ ಎಂದರಲ್ಲದೇ, ಹಾಸನದಲ್ಲಿ ನಿರ್ಮಿಸಲಾಗಿರುವ ರಾಜ್ಯದಲ್ಲಿಯೇ ಅಪರೂಪದ ವಿನ್ಯಾಸವುಳ್ಳ ನ್ಯಾಯಾಲಯದ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಅಗತ್ಯ ಸಹಕಾರ ನೀಡುವಂತೆ ಕೋರಿದರು.
ಪಟ್ಟಣದ ನ್ಯಾಯಾಲಯಕ್ಕೆ ಅವಶ್ಯಕವಿರುವ ಸುಸಜ್ಜಿತ ಗ್ರಂಥಾಲಯವನ್ನು ಆರಂಭಿಸಲು ಅವಶ್ಯಕವಾದ ಅನುದಾನವನ್ನು ತಮ್ಮ ಶಾಸಕರ ನಿಧಿಯಿಂದ ನೀಡುವುದಾಗಿ ಭರವಸೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಭಾಷ್ಯಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿ ಎ.ತಾಂಡವೇಶ್ವರ 120 ವರ್ಷಗಳಷ್ಟು ಹಳೆಯದಾದ ನ್ಯಾಯಾಲಯ ಕಟ್ಟಡ ಹಾಗೂ ಅದರ ಇತಿಹಾಸ, ಹಳೆಯ ನ್ಯಾಯಾಲಯ ಕಟ್ಟಡದಲ್ಲಿನ ನ್ಯಾಯಾಂಗ ವ್ಯವಸ್ಥೆ ಹಾಗೂ ಅಲ್ಲಿ ನೀಡಿರುವ ಐತಿಹಾಸಿಕ ತೀರ್ಪುಗಳು ಇನ್ನಿತರ ಸ್ವಾರಸ್ಯಕರ ಸನ್ನಿವೇಶಗಳನ್ನು ತಮ್ಮ ಅನುಭವದ ಹಿರಿತನದೊಂದಿಗೆ ಸಭೆಯ ಮುಂದಿಟ್ಟರು. ಸಮಾರಂಭದಲ್ಲಿ ಎಲ್ಲಾ ಗೌರವಾನ್ವಿತ ನ್ಯಾಯಮೂರ್ತಿಗಳನ್ನು ತಾಲೂಕು ವಕೀಲರ ಸಂಘ, ಶಾಸಕ ಎಚ್.ಡಿ.ರೇವಣ್ಣ ಹಾಗೂ ಹಿರಿಯ ನ್ಯಾಯವಾದಿ ಹಾಗೂ ಗಾಂಧಿವಾದಿ ರಾಮಕೃಷ್ಣಯ್ಯ ಸನ್ಮಾನಿಸಿದರು.
ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶ ಎಚ್.ಬಿಳ್ಳಪ್ಪ, ರಾಜ್ಯ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್, ರಾಜ್ಯದಲ್ಲಿನ ನ್ಯಾಯಾಲಯಗಳಲ್ಲಿನ ಸೌಕರ್ಯಗಳ ಸಮೀಕ್ಷೆ ಮತ್ತು ಉಸ್ತುವಾರಿ ಹೊತ್ತಿರುವ ನ್ಯಾಯಮೂರ್ತಿ ಎನ್.ಕೆ.ಪಾಟೀಲ್, ಕೆ.ಎನ್.ಕೇಶವನಾರಾಯಣ, ಅರವಿಂದ ಕುಮಾರ್, ವಿ.ಚಂದ್ರಶೇಖರ್, ಸಿ.ಆರ್.ಗೋಪಾಲಸ್ವಾಮಿ, ಜಿಲ್ಲಾ ಪ್ರಧಾನ ನ್ಯಾಯಾಧೀಶ ಜೆ.ಎಸ್.ಸೋಮಶೇಖರ, ಜಿಲ್ಲಾ ಸಿಜೆಎಂ ಮುಸ್ತಫಾ ಹುಸೇನ್, ತಾ. ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಡಿ.ಕಂಬೇಗೌಡ, ಕಿರಿಯ ಸಿವಿಲ್ ನ್ಯಾಯಾಧೀಶ ಸಿ.ಸನತ್, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ ಇದ್ದರು. ವಕೀಲ ಅರುಣ್ಕುಮಾರ್ ನಿರೂಪಿಸಿದರು. ಸರ್ಕಾರಿ ಸಹಾಯಕ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡರ್ ವಂದಿಸಿದರು.