ವಕೀಲರು ಸಮಾಜಮುಖಿಗಳಾಗಲಿ
ಅರಕಲಗೂಡು: ಸಮಾಜದ ವ್ಯವಸ್ಥೆಯಲ್ಲಿ ಹತ್ತು ಹಲವು ಸಮಸ್ಯೆಗಳು ಜನಸಾಮಾನ್ಯರನ್ನು ಕಾಡುತ್ತಿದ್ದು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಸರ್ಕಾರದ ಜೊತೆಗೆ ನಮ್ಮೆಲ್ಲರ ಭಾಗಿತ್ವವೂ ಅಡಕವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದ ನೂತನ ಕಟ್ಟಡ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮೊದಲ ಮಹಡಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ವಿವಿಧ ಸ್ಥರಗಳಲ್ಲಿ ನಾನು ನಮ್ಮೆಲ್ಲರ ಕಾಳಜಿ ಕುರಿತು ಚಿಂತನೆ ಮಾಡುತ್ತೇವೆ. ಆದರೆ ಇಂದು ನಮ್ಮೆಲ್ಲರಿಗೂ ಅನ್ನ ನೀಡುವ ರೈತನ ಬಗೆಗಿನ ಕಾಳಜಿ ಇಲ್ಲವಾಗಿದೆ.ನಮ್ಮೆಲ್ಲರಿಗೂ ರೈತ ಪರ ಕಾಳಜಿ ಹೊಂದುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ, ನ್ಯಾಯಾಧೀಶರು ಮತ್ತು ವಕೀಲರುಗಳೂ ಭಾಗಿಗಳಾಗಬೇಕೆಂದರು.
ಡಾ. ಅಂಬೇಡ್ಕರ್ ನೀಡಿದ ಸಂವಿಧಾನದ ಸಂಪೂರ್ಣ ಅನುಷ್ಠಾನ ಇನ್ನೂ ಸಾಧ್ಯವಾಗದಿರುವ ಬಗೆಗೆ ವಿಷಾದಿಸಿದ ಅವರು ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿದರೆ ಇದು ಸಾಧ್ಯವಾದೀತು ಎಂದ ಅವರು ದೇಶ ಅಪಾರವಾದ ನೈಸರ್ಗಿಕ ಸಂಪತ್ತು ಹೊಂದಿದೆ. ಅವುಗಳನ್ನು ವ್ಯವಸ್ಥಿತವಾಗಿ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಂಡರೆ ಯಾವ ಅಪಾಯವೂ ಇಲ್ಲದೇ ದೇಶವನ್ನು ಮುನ್ನಡೆಸಲು ಸಾಧ್ಯ. ಆದರೆ ನೈಸರ್ಗಿಕ ಸಂಪನ್ಮೂಲಗಳು ಸ್ವಾರ್ಥ ಸಾಧನೆಗಾಗಿ ಬಳಕೆಯಾದರೆ ದೇಶಕ್ಕೆ ಆಪತ್ತು ಖಂಡಿತ ಎಂದು ನುಡಿದರು.
ಜನಸಾಮಾನ್ಯರ ಬಗ್ಗೆ ಕಾಳಜಿ ಅಗತ್ಯ: ಚುನಾಯಿತ ಪ್ರತಿನಿಧಿಗಳು, ನ್ಯಾಯಾಧೀಶರು ಸೇರಿದಂತೆ ಸಮಾಜದ ಎಲ್ಲ ಸ್ಥರಗಳಲ್ಲೂ ಜನಸಾಮಾನ್ಯರ ಬಗೆಗಿನ ಕಾಳಜಿ ಪ್ರದರ್ಶಿಸುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಸಮಾಜ ವ್ಯವಸ್ಥೆಯನ್ನು ಜಾಗೃತಗೊಳಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಅವುಗಳನ್ನು ಹೊರ ತಂದು ಸಮಾಜದ ಆಸ್ತಿಯಾಗಿ ರೂಪಿಸಿಕೊಳ್ಳುವ ಹೊಣೆಗಾರಿಕೆ ಸಮಾಜಕ್ಕೆ ಸೇರಿದ್ದು ಎಂದರು.
ದೇಶ ಅಭಿವೃದ್ಧಿ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಆದರೆ ಇಂದು ಅವಶ್ಯವಾಗಿರುವುದು ದೇಶದ ಸರ್ವತೋಮುಖ ಪ್ರಗತಿ. ರೈತರ ಭೂಮಿ ಸ್ವಾಧೀನ ಪಡಿಸಿಕೊಂಡು ಕೆಲವೇ ವ್ಯಕ್ತಿಗಳಿಗೆ ಭವ್ಯ ಬಂಗಲೆಗಳನ್ನು ಕಟ್ಟಲು ನೀಡಿ,ರೈತರನ್ನು ನಿರ್ಗತಿಕರನ್ನಾಗಿ ಮಾಡಿದರೆ ಅದು ಪ್ರಗತಿಯೇ ಎಂದು ಪ್ರಶ್ನಿಸಿದರು.
ವಕೀಲರು ಸಮಾಜಮುಖಿಗಳಾಗಿ ಕೆಲಸ ನಿರ್ವಹಿಸಬೇಕು. ಅನ್ನದಾತರ ಬಗೆಗಿನ ಕಾಳಜಿ ತಪ್ಪದಿರಲಿ ಎಂದು ವಕೀಲರಿಗೆ ಕಿವಿಮಾತು ಹೇಳಿ, ವಕೀಲರು ವೈರುಧ್ಯಗಳನ್ನು ಬಿಟ್ಟು ಒಟ್ಟಿಗೆ ಕೆಲಸ ಮಡುವ ಚಿಂತನೆ ನಡೆಸಿ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ-ಟಿಪ್ಪಣಿಗಳು ಸಾಮಾನ್ಯ. ಅದು ಅವರ ಹಕ್ಕೂ ಸಹ. ಆದರೆ ಒಬ್ಬರು ಮತ್ತೊಬ್ಬರ ತೇಜೋವಧೆ ಮಾಡುವುದು ಸಾಧುವಲ್ಲ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸಿ ಸಮಾಜದ ಬದಲಾವಣೆಗೆ ಪ್ರಯತ್ನಿಸಿ ಎಂದು ತಿಳಿಸಿದರು.
ವಕೀಲರ ಭವನ ನಿರ್ಮಾಣ: ರಾಜ್ಯ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವಕೀಲರ ಭವನಗಳನ್ನು ನಿರ್ಮಿಸುವ ಬಗೆಗೆ ಸಕಾರಾತ್ಮಕ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೇಶವ ನಾರಾಯಣ ಮಾತನಾಡಿ ನ್ಯಾಯದಾನದ ವ್ಯವಸ್ಥೆಯಲ್ಲಿ ಲೋಪಗಳು ಸಂಭವಿಸಿದರೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ.ಇಂತಹ ಸಮಾಜದಿಂದ ಉತ್ತಮವಾದುದನ್ನು ಕಾಣಲು ಸಾಧ್ಯವಿಲ್ಲ ಎಂದರು.
ನ್ಯಾಯಮೂರ್ತಿಗಳಾದ ಅರವಿಂದಕುಮಾರ್,ಎ.ವಿ.ಚಂದ್ರಶೇಖರ್,ಕೆ.ಎಲ್.ಮಂಜುನಾಥ್,
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎ.ಮಂಜು, ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಸಿ.ಆರ್.ಗೋಪಾಲಸ್ವಾಮಿ, ಕೇಂದ್ರ ಬಾರ್ ಕೌನ್ಸಿಲ್ ಸದಸ್ಯ ಬೋಜೇಗೌಡ, ಎಚ್.ವಿ.ತಿಮ್ಮೇಗೌಡ,ಅರಕಲಗೂಡು ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ರಾಜೇಶ್,ಕಾರ್ಯದರ್ಶಿ ಪ್ರಕಾಶ್ ಇತರರು ಇದ್ದರು.
ರಸ್ತೆ ದುರಸ್ತಿಗೆ ಸೂಚನೆ
ಅರಕಲಗೂಡು: ಹಾಸನ-ಪಿರಿಯಾಪಟ್ಟಣ ರಸ್ತೆ ದುರಸ್ತಿ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಸೂಚನೆ ನೀಡಿದರು. ಇದೇ ವೇಳೆ ಶಾಸಕ ಎ.ಮಂಜು ಅವರು ಹಾಸನದಿಂದ ಪಿರಿಯಾಪಟ್ಟಣದವರೆಗಿನ ರಸ್ತೆ ಹಾಳಾಗಿರುವ ಬಗೆಗೆ ಮಾಡಿದ ಮನವಿ ಕುರಿತು ಪ್ರಸ್ತಾಪಿಸಿದ ಗೋಪಾಲಗೌಡರು ತಾಂತ್ರಿಕ ಕಾರಣಗಳು ಏನೇ ಇರಲಿ ಅವುಗಳನ್ನು ಸರಿಪಡಿಸಿ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಮಹದೇವಪ್ಪ ಜನಪರ ಚಿಂತನೆ ಹೊಂದಿರುವ ಬಗೆಗೆ ತಿಳಿದಿದ್ದೇನೆ. ಆದರೆ ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲೂ ಕಾರ್ಯಮುಖರಾಗ ಬೇಕಾಗುತ್ತದೆ. ಕೂಡಲೇ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.