ಹೆಜ್ಜೆ ಹೆಜ್ಜೆಗೂ ತಪಾಸಣೆ, ಹಾಸನಾಂಬೆ ಭಕ್ತರಿಗೆ ಕಿರಿಕಿರಿ
ಕ.ಪ್ರ.ವಾರ್ತೆ , ಹಾಸನ , ಅ. 26
ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಶನಿವಾರ ಮೂರನೆ ದಿನಕ್ಕೆ ಮುಂದುವರೆದಿದ್ದು, ಅಷ್ಟಾಗಿ ನೂಕು-ನುಗ್ಗಲು ಇಲ್ಲದೆ ಭಕ್ತರು ದೇವಿ ದರ್ಶನ ಸಾಂಗವಾಗಿ ನಡೆಯುತ್ತಿದೆ. ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬೆಯ ದರ್ಶನ ಶಾಂತ ರೀತಿಯಲ್ಲಿ ನಡೆಯುತ್ತಿದೆ. ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭ್ಯವಾಗಿರುವುದರಿಂದ ದೇವಿಯ ದರ್ಶನ ಬೆಳಗ್ಗೆ ಮಂದಗತಿಯಲ್ಲಿ ನಡೆಯಿತು.
ಅಶ್ವೀಜ ಮಾಸದ ಮೊದಲ ಗುರುವಾರ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಪ್ರತಿವರ್ಷದಂತೆ ಈ ವರ್ಷವು ಸಹ ಅರಸು ವಂಶಸ್ಥ ನರಸಿಂಹರಾಜ ಅರಸು ಗರ್ಭಗುಡಿಯ ಮುಂಭಾಗದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಹಾಸನಾಂಬೆಯ ದೇವಾಲಯ ಬಾಗಿಲನ್ನು ತೆರೆಯಲಾಯಿತು. ದೇವಾಲಯದ ಬಾಗಿಲನ್ನು ತೆರೆದ ಮೊದಲೆರಡು ದಿನ ಭಕ್ತರು ದೇವಿಯ ದರ್ಶನ ಮಾಡಲು ಜಮಾಯಿಸಿದ್ದರು.
ಆದರೆ ಮೂರನೇ ದಿನ ದೇವಿ ದರ್ಶನಕ್ಕೆ ಭಕ್ತರು ಅಷ್ಟಾಗಿ ಆಗಮಿಸಿರಲಿಲ್ಲ. ನೂಕು ನುಗ್ಗಲು, ತಳ್ಳಾಟ ಇಲ್ಲದೇ ದೇವಿಯ ದರ್ಶನ ಭಕ್ತರು ಪಡೆದರು. ಭಕ್ತರಿಗಿಂತ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯೇ ಹೆಚ್ಚಾಗಿದ್ದರು. ಬಿಗಿ ಬಂದೋಬಸ್ತ್ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಇಲ್ಲಿ ನಿಯೋಜಿಸಿದೆ. ಆದರೆ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಗಿಂತ ಪೊಲೀಸ್, ಕಂದಾಯ ಹಾಗೂ ಗೃಹ ರಕ್ಷಕ ದಳದವರ ಸಂಖ್ಯೆಯೇ ಹೆಚ್ಚಾಗಿದೆ. ಹಾಸನಾಂಬೆಯ ದರ್ಶನಕ್ಕೆ ಆಗಮಿಸುವ ಭಕ್ತರು ಇಲಾಖೆ ಸಿಬ್ಬಂದಿ ಕಿರಿಕಿರಿಯಿಂದ ಬೇಸತ್ತು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಜ್ಜೆ ಹೆಜ್ಜೆಗೂ ಭಕ್ತರನ್ನು ಅಡ್ಡಗಟ್ಟಿ ತಡೆಯುತ್ತಿದ್ದಾರೆ. ದೇವಿ ದರ್ಶನಕ್ಕಿಂತ ಇಲ್ಲಿನ ಸಿಬ್ಬಂದಿಗಳ ಕಿರಿಕಿರಿಯನ್ನು ಭಕ್ತರು ಅನುಭವಿಸುವಂತಾಗಿದೆ. ವ್ಯವಸ್ಥಿತವಾಗಿ ಬಂದೋಬಸ್ತ್ ಮಾಡಬೇಕೇ ಹೊರತು ಪೊಲೀಸರನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸುವುದಲ್ಲ. ಹೀಗೆ ಪೊಲೀಸರೇ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂಬ ಅಸಮಾಧಾನ ಜನರಲ್ಲಿ ವ್ಯಕ್ತವಾಗಿದೆ.