ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆಯಲ್ಲಿ ವಿಜೃಂಭಣೆಯ ಗಣೇಶ ವಿಸರ್ಜನೋತ್ಸವ

Vishwanath S
Updated On : 28 Oct 2013, 12:08 pm

ಅರಸೀಕೆರೆ: ಮೈಸೂರು ದಸರಾ ಹೋಲುವ ಪಟ್ಟಣದ ಗಣೇಶೋತ್ಸವ ಮೆರವಣಿಗೆಯಲ್ಲಿ 40 ಕ್ಕೂ ಹೆಚ್ಚಿನ ಸಾಂಸ್ಕೃತಿಕ ಕಲಾ ತಂಡಗಳು ಜನಮನಸೂರೆಗೊಂಡಿತು. ರಾತ್ರಿ ಕಂತೇನಹಳ್ಳಿ ಕೆರೆಯ ಬಳಿಯಲ್ಲಿ ಬಾನಿನಲ್ಲಿ ಚಿತ್ತಾಕರ್ಷಕ ಮೂಡಿಸಿದ ಮದ್ದುಗುಂಡುಗಳ ಆಕರ್ಷಕ ಪ್ರದರ್ಶನ ನೆರದಿದ್ದ ಸಹಸ್ರಾರು ಜನರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು.ಪಟ್ಟಣದ ಶ್ರೀಪ್ರಸನ್ನ ಗಣಪತಿಯ 72ನೇ ವರ್ಷದ ವಿಸರ್ಜನಾ ಮಹೋತ್ಸವ ಶುಕ್ರವಾರ ಸಂಜೆ ಆರಂಭಗೊಂಡ 2ನೇ ದಿನವಾದ ಶನಿವಾರವೂ ಶಾಂತಿಯುತವಾಗಿ ಮುಂದುವರೆದು ರಾತ್ರಿ 8.30 ವೇಳೆಗೆ ಕೆರೆಯ ಬಳಿಯಲ್ಲಿ ಗಣೇಶನ ಮೆರವಣಿಗೆ ಬರುತ್ತಿದ್ದಂತೆ, ತಾಲೂಕಿನ ಅಗ್ಗುಂದ ಗ್ರಾಮದ ರಾಷ್ಟ್ರ ಪ್ರಶಸ್ತಿ ವಿಜೇತರಾಜ್‌ಕಮಲ್ ವರ್ಕ್ಸ್‌ನ ಎ.ಆರ್. ಶಂಕರಾಚಾರ್ ತಂಡವರಿಂದ ಭೂಮಿಯನ್ನೇ ನಡುಗಿಸುವಂತಹ ರಣಪ್ರಚಂಡ, ಗಗನದಲ್ಲಿ ಬಣ್ಣ, ಬಣ್ಣದ ಚಿತ್ತಾರವನ್ನೇ ಮೂಡಿಸಿದ ಮದ್ದು ಗುಂಡುಗಳ ಆಕರ್ಷಕ ಪ್ರದರ್ಶನಗಳು ಜನರ ಮೆಚ್ಚುಗೆಗೆ ಪಾತ್ರವಾಯಿತು.
 ಈ ಸಂದರ್ಭದಲ್ಲಿ ಕೆರೆಯ ಬಳಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ ಸಾರ್ವಜನಿಕ ರಂಗದಲ್ಲಿ ಎಷ್ಟೇ ಪ್ರಾಮಾಣಿಕ ಕೆಲಸ ಮಾಡಿದರೂ ನಿಂದನೆಗೆ ಒಳಗಾಗ ಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಹಾಯ ಹಸ್ತವನ್ನು ನೀಡಿದ ಎಲ್ಲಾ ದಾನಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿದ ಶಾಸಕರು, 72 ನೇ ವರ್ಷದ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಹೆಚ್ಚಿನ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿಸರ್ಜನಾ ಮಹೋತ್ಸವ ಕಾರ್ಯಕ್ರಮಕ್ಕೆ ತಾವು ಹಾಗೂ ಉದ್ಯಮಿ ಜೆ.ಪಿ.ನಾರಾಯಣಸ್ವಾಮಿ ಮತ್ತು ಅರುಣಕುಮಾರ್ ತಲಾ ಲಕ್ಷ ರು.ಗಳನ್ನು ನೀಡಿದ್ದು, ಮಾಜಿ ಪುರಸಭಾಧ್ಯಕ್ಷ ಎಂ.ಸಮಿವುಲ್ಲ ನೀಡಿದ 75 ಸಾವಿರ ರು. ಸೇರಿದಂತೆ ಒಟ್ಟು 8,45,000 ರು.ಗಳು ಸಂಗ್ರಹವಾಗಿದ್ದು, ವಿವಿಧ ಕಲಾತಂಡಗಳಿಗೆ ನೀಡಿದ ಹಣ ಹಾಗೂ ಇತ್ಯಾದಿ ಖರ್ಚು ಕಳೆದು 26,500 ರು.ಗಳು ಉಳಿತಾಯವಾಗಿದೆ ಎಂದು ಲೆಕ್ಕಪತ್ರಇದೇ ಸಂದರ್ಭದಲ್ಲಿ ಮಂಡಿಸಿದರು.
 ಗಣಪತಿ ಭಕ್ತ ಮಂಡಲಿ ಅಧ್ಯಕ್ಷ ಎಸ್.ಎನ್.ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಸಿ.ರಾಜಣ್ಣ, ಕಾರ್ಯದರ್ಶಿ ಶಾಂತವೀರಯ್ಯ, ನಾಗಭೂಷಣ್, ಕೆ.ಪಿ.ವಿಶ್ವನಾಥ್, ಮುರುಗೇಂದ್ರಪ್ಪ, ಆರ್.ಅನಂತ್‌ಕುಮಾರ್, ಟಿ.ಎಸ್.ರುದ್ರಪ್ಪ, ವಿಜಯಕುಮಾರ್, ಜಿ.ವಿ.ಟಿ.ಬಸವರಾಜು, ಕೆ.ಎನ್.ದುರ್ಗಪ್ಪಶೆಟ್ಟಿ, ಟಿ.ಆರ್.ನಾಗರಾಜು, ಪುರಸಭಾಧ್ಯಕ್ಷ ಮೋಹನ್‌ಕುಮಾರ್, ಸದಸ್ಯರು ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement