ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಧುನಿಕ ತಂತ್ರಜ್ಞಾನ ಬಳಸಿ ಬೆಳೆದ ಕಬ್ಬು ಪರಿಶೀಲನೆ

Vishwanath S
Updated On : 28 Oct 2013, 12:06 pm

ಚನ್ನರಾಯಪಟ್ಟಣ: ತಾಲೂಕಿನ ಶ್ರೀನಿವಾಸಪುರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಪ್ರಾಯೋಗಿಕವಾಗಿ ಜೋಡಿ ಸಾಲಿನಲ್ಲಿ 6 ಅಡಿ ಅಂತರದಲ್ಲಿ ಕಬ್ಬಿನ ಸಸಿ ನಾಟಿ ಮಾಡಿ ಸಾಲಿನ ಮಧ್ಯೆ ಹನಿ ನೀರಾವರಿ ಪೈಪ್‌ಗಳನ್ನು ಅಳವಡಿಸಿ ಹನಿ ನೀರಾವರಿ ಪದ್ಧತಿಯನ್ನು ಬಳಸಿ ಉತ್ತಮವಾಗಿ ಕಬ್ಬಿನ ಬೆಳೆ ಬೆಳೆದಿದ್ದು, ಇದು ರೈತರಿಗೆ ಮಾದರಿಯಾಗಿದೆ.
 ಜೋಡಿ ಸಾಲು ಕಬ್ಬು ಸಸಿ ನಾಟಿ ಮಾಡಿ ಜೋಡಿ ಸಾಲಿನ ಮಧ್ಯೆ ಹನಿ ನೀರಾವರಿ ಪೈಪ್‌ಲೈನ್ ಬಳಸಿ ರಾಸಾಯನಿಕ ಹಾಗೂ ಔಷಧಿಯನ್ನು ಹನಿ ನೀರಾವರಿ ಪೈಪ್ ಮುಖೇನ ನೀಡುವ ಮುಖೇನ ಉತ್ತಮವಾಗಿ ಬೆಳೆದಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಮುಂದಿನ ದಿನಗಳಲ್ಲಿ ಇದೇ ಪದ್ಧತಿಯಲ್ಲಿ ರೈತರು ಕಬ್ಬು ಬೆಳೆಯುವಂತೆ ಒತ್ತಾಯಿಸುತ್ತಿದ್ದಾರೆ.   ಕೃಷಿ ಇಲಾಖೆ ವತಿಯಿಂದ ಶೇ.75ರ ಸಹಾಯಧನದಲ್ಲಿ ಹನಿ ನೀರಾವರಿ ಕಲ್ಪಿಸುವ ಯೋಜನೆಯನ್ನು ಬಳಸಿಕೊಂಡು ಕಬ್ಬು ಬೆಳೆಯಲು ಮುಂದೆ ಬರುವ ರೈತರಿಗೆ ಕಬ್ಬಿನ ಸಸಿಗಳನ್ನೂ ಸಹಾಯಧನದಲ್ಲಿ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು,  ರೈತರಿಗೆ ಈ ಬಗ್ಗೆ ಮಾಹಿತಿ ನೀಡುವುದು ಅವಶ್ಯವಿದೆ ಎಂದು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಬ್ರಿಟ್ಟೋ ತಿಳಿಸಿದರು.
 ಜಿಲ್ಲೆಯ ಕೃಷಿ ತಜ್ಞರ ತಂಡ ಪ್ರತಿ ಎರಡು ತಿಂಗಳಿಗೊಮ್ಮೆ ಹೊಸ ಹೊಸ ಬೆಳೆಗಳ ಆವಿಷ್ಕಾರದ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತಾಲೂಕಿನ ಚಾಮುಂಡೇಶ್ವರಿ ಸಕ್ಕರೆ  ಕಾರ್ಖಾನೆಯ ಆವರಣದಲ್ಲಿ ಬೆಳೆದಿರುವ ಕಬ್ಬಿನ ಬೆಳೆ ಬಗ್ಗೆ ಮಾಹಿತಿ ನೀಡಿ ಬರಗಾಲ ಹಾಗೂ ವಿದ್ಯುತ್ ಕೊರತೆಯ ಮಧ್ಯೆಯೂ ಕಬ್ಬು ಬೆಳೆಯುವ ರೈತ ಈ ಪದ್ಧತಿಯನ್ನು ಅನುಸರಿಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವರಾಜು ತಿಳಿಸಿದರು.
 ತಾಲೂಕಿನಲ್ಲಿ ಕಬ್ಬಿನ ಜತೆಗೆ ರಾಗಿ, ಭತ್ತ, ತೊಗರಿ ಸೇರಿದಂತೆ ವಿವಿದ ಹೊಸ ಹೊಸ ತಳಿಗಳನ್ನು ರೈತರಿಗೆ  ನೀಡಿ ಕೃಷಿ ತಂತ್ರಜ್ಞರ ಸಲಹೆಯಂತೆ ಬೆಳೆಯುವಂತೆ ಮಾರ್ಗದರ್ಶನ ನೀಡಿರುವುದಲ್ಲದೆ ಅವುಗಳ ನಿರ್ವಹಣೆ ಬಗ್ಗೆ ಪ್ರತಿ ಎರಡು ತಿಂಗಳಿಗೊಮ್ಮೆ ತಜ್ಞರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
 ಚನ್ನರಾಯಪಟ್ಟಣ ತಾಲೂಕು ದಕ್ಷಿಣ ಒಣ  ವಲಯ ಪ್ರದೇಶಕ್ಕೆ ಸೇರಿದ್ದು, ತಾಲೂಕಿನಲ್ಲಿ ಹೊಸ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆಸುತ್ತಿದ್ದು, ಎಲ್ಲಾ ಬೆಳೆಗಳು ಉತ್ತಮವಾಗಿ ಬೆಳೆದಿರುವುದಲ್ಲದೆ ಉತ್ತಮ ಇಳುವರಿಯನ್ನೂ ನಿರೀಕ್ಷೆ ಮಾಡಲಾಗಿದೆ ಎಂದು ನುಡಿದರು.
 ತಾಲೂಕಿನ ಚಿಕ್ಕ ಕರಡೆ ಐಇಟಿ 21214, ಬತ್ತ, ಆತ್ಮ ಯೋಜನೆಯಡಯಲ್ಲಿ ಬರಗೂರಿನಲ್ಲಿ ಬೆಳೆಯಲಾಗಿರುವ ಮುಸುಕಿನ ಜೋಳ ಮತ್ತು ರಾಗಿಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ, ದೇವಿಗೆರೆ ಕೆಎಂಆರ್ 204 ರಾಗಿ, ಶೆಟ್ಟಿಹಳ್ಳಿ ಅರೆ ನೀರಾವರಿಯಲ್ಲಿ ಕೆಎಂಪಿ 175 ಭತ್ತ ಗುಲಸಿಂದ ಕೆಆರ್‌ಎಚ್ 4 ಹೈಬ್ರಿಡ್ ಬತ್ತವನ್ನು ಆತ್ಮ ಯೋಜನೆಯಡಿಯಲ್ಲಿ  ಬೆಳೆಯಲಾಗಿದೆ ಎಂದು ವಿವರಿಸಿದರು.
 ಗೊಲ್ಲರಹೊಸಹಳ್ಳಿ ಗ್ರಾಮದ ಗಣೇಶ್ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡು ವೆನಿಲಾ,  ಅರಿಶಿನ ಹಾಗೂ ಸ್ಥಳೀಯ ಬತ್ತದ ತಳಿಯನ್ನು ಸಾವಯವ ಕೃಷಿಯಲ್ಲಿ ಬೆಳೆದಿರುವುದನ್ನು ಪರಿಶೀಲಿಸಲಾಯಿತು ಎಂದು ತಿಳಿಸಿದರು.  
 ಮಂಡ್ಯ ವಿಸಿ ಫಾರಂ ಬತ್ತದ ತಳಿ ವಿಜ್ಞಾನಿ ಡಾ. ಎಂ.ಪಿ ರಾಜಣ್ಣ, ಸಹ ವಿಸ್ತರಣಾ ನಿರ್ದೇಶಕ ಡಾ.ಶಿವಶಂಕರ್  ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಲ್ಲೇಶಗೌಡ, ಹೋಬಳಿ ಕೃಷಿ ಅಧಿಕಾರಿಗಳು ಹಾಗೂ ತಾಂತ್ರಿಕ ಅಧಿಕಾರಿ ಪುಟ್ಟ ಬೈಲಯ್ಯ  ತಂಡದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement