ಆರ್ಥಿಕ ಏಳ್ಗೆಗಾಗಿ ಕೈಗಾರಿಕೆ ಸ್ಥಾಪನೆ ಅಗತ್ಯ
ಕ.ಪ್ರ. ವಾರ್ತೆ, ಹೊಳೆನರಸೀಪುರ, ಅ. 27
ಜಿಲ್ಲೆಯ ಆರ್ಥಿಕಾಭಿವೃದ್ಧಿ ಜೊತೆಗೆ ಜನರ ಆರ್ಥಿಕ ಹಾಗೂ ಸಾಮಾಜಿಕ ಏಳ್ಗೆಗಾಗಿ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸುವ ಅಗತ್ಯವಿದ್ದು, ಈ ಕುರಿತಂತೆ ಚಿಂತನೆ ನಡೆಸಲಾಗಿದ್ದು ಶೀಘ್ರದಲ್ಲಿಯೇ ಈ ನಿಟ್ಟಿನಲ್ಲಿ ಚಟುವಟಿಕೆಗಳು ಕಾರ್ಯಾರಂಭಗೊಳ್ಳಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಲ್ಲಿ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ವಾಸವಾಂಬ ಕೋ ಆಪರೇಟೀವ್ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರ ಆದಾಯದ ಮೂಲವನ್ನು ಹೆಚ್ಚಿಸುವ ಸಲುವಾಗಿ ಕೈಗಾರಿಕೆಗಳನ್ನು ಹೆಚ್ಚಾಗಿ ಸ್ಥಾಪಿಸಿದಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚಿ ಜನರ ಜೀವನ ಹಾಗೂ ಆದಾಯವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹಲವು ಕೈಗಾರಿಕೆಗಳನ್ನು ಜಿಲ್ಲೆಗೆ ಕರೆತರುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ಹಿಂದೆ ಸುಸ್ಥಿತಿಯಲ್ಲಿದ್ದ ಆರ್ಯವೈಶ್ಯ ಸಮುದಾಯವು ಇಂದಿನ ಜಾಗತಿಕ ಪೈಪೋಟಿಯಿಂದಾಗಿ ಸಂಕಷ್ಟವನ್ನು ಎದುರಿಸುವ ಸ್ಥಿತಿಯಲ್ಲಿದ್ದು, ಅಲ್ಪಸಂಖ್ಯಾತರಾಗಿರುವ ಆರ್ಯವೈಶ್ಯ ಸಮಾಜದ ಪ್ರಗತಿಗಾಗಿ ಪಟ್ಟಣದ ಅಭಿವೃದ್ಧಿ ಸಲುವಾಗಿ ವಹಿಸಬಹುದಾದ ಕ್ರಮಗಳನ್ನು ಕುರಿತಂತೆ ಶಾಸಕ ಎಚ್.ಡಿ.ರೇವಣ್ಣ ಅವರೊಂದಿಗೆ ತಾವು ಚರ್ಚಿಸುವುದಾಗಿ ತಿಳಿಸಿದರು. ತಾವೊಬ್ಬ ಸಾಮಾನ್ಯ ರೈತನ ಮಗನಾಗಿದ್ದ ನನ್ನನ್ನು ಗುರುತಿಸಿ, ಕೈಹಿಡಿದು ಬೆಳೆಸಿದ ನನ್ನ ಜನರನ್ನು ನಾನು ಮರೆತಿಲ್ಲ ಮತ್ತು ಎಂದಿಗೂ ಮರೆಯುವುದಿಲ್ಲ. 50 ವರ್ಷಕ್ಕೂ ಮಿಗಿಲಾದ ನನ್ನ ರಾಜಕೀಯ ಜೀವನವು ನನ್ನ ಜನ ಹಾಗೂ ದೇವರು ನೀಡಿದ ಆಶೀರ್ವಾದದ ಫಲವಾಗಿದ್ದು, ನನ್ನ ಜೀವನದ ಕಡೆಯ ಕ್ಷಣದವರೆವಿಗೂ ನನ್ನ ಜನರ ಕೆಲಸ ಮಾಡುವೆ ಎಂದರು.
ಯಾವುದೇ ಹಗರಣಗಳಿಗೂ ಸಿಲುಕದೆ, 100 ವರ್ಷಗಳ ಸುದೀರ್ಘ ಸೇವಾ ಅವಧಿಯನ್ನು ಪೂರೈಸಿರುವ ವಾಸವಾಂಬ ಕೋ ಆಪರೇಟೀವ್ ಬ್ಯಾಂಕಿನ ಸಾಧನೆ ಸಣ್ಣದೇನಲ್ಲ ಎಂದು ಬ್ಯಾಂಕು ಬೆಳೆದು ಬಂದ ದಾರಿ ಹಾಗೂ ಸಲ್ಲಿಸಿರುವ ಸೇವೆಯನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ದೇವೇಗೌಡ ಅವರು, ಸಹಕಾರಿ ಸಂಸ್ಥೆಯೊಂದನ್ನು ಸಮಾಜ ಮುಖಿಯಾಗಿ ರೂಪಿಸುವ ದೂರ ದೃಷ್ಟಿತ್ವದಿಂದ ಸ್ಥಾಪಿಸಿದ ಆರ್ಯವೈಶ್ಯ ಜನಾಂಗದ ಹಿರಿಯರ ಚಿಂತನೆಯನ್ನು ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣದಲ್ಲಿ ಕೆಲವು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಅವಕಾಶ ನೀಡುವ ಉದ್ದೇಶವಿದ್ದರೂ, ಸೂಕ್ತವಾದ ಭೂಮಿಯ ಕೊರತೆಯಿದೆ ಎಂದ ಅವರು, ತಾಲೂಕಿನಲ್ಲಿ ಹಲವು ಉದ್ದಿಮೆಗಳು ಸ್ಥಾಪನೆಗೊಂಡಲ್ಲಿ ಇಲ್ಲಿನ ಜನರ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದ ಅವರು, ಸಮಾರಂಭದಲ್ಲಿ ತಮ್ಮ ರಾಜಕೀಯ ಜೀವನದ ಆರಂಭದ ದಿನಗಳಲ್ಲಿ ತಮ್ಮೊಂದಿಗಿದ್ದ ಹಲವು ಗಣ್ಯರನ್ನು ಹಾಗೂ ಆರ್ಯವೈಶ್ಯ ಜನಾಂಗದ ಹಿರಿಯರನ್ನು ನೆನಪಿಸಿಕೊಂಡು ಅವರ ಹೆಸರುಗಳನ್ನು ಪ್ರಸ್ತಾಪಿಸಿದರಲ್ಲದೇ, ಅವರ ಕುಟುಂಬ ವರ್ಗದವರನ್ನು ಕಂಡು ಆತ್ಮೀಯವಾಗಿ ಮಾತನಾಡಿಸಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ಸಮಾರಂಭದಲ್ಲಿ ಬ್ಯಾಂಕಿನ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಆರ್ಯವೈಶ್ಯ ಸಹಕಾರಿ ಬ್ಯಾಂಕ್ ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷ ಎಸ್.ಎ.ವಾಸುದೇವಮೂರ್ತಿ ಉದ್ಘಾಟಿಸಿದರು. ಕಾರ್ಯದರ್ಶಿ ಆರ್.ಎಲ್.ಪ್ರಭಾಕರ್ ಮುಖ್ಯ ಅತಿಥಿಯಾಗಿದ್ದರು, ಬ್ಯಾಂಕಿನ ಅಧ್ಯಕ್ಷ ಕೆ.ಶ್ರೀಧರ್, ಮಾಜಿ ಅಧ್ಯಕ್ಷ ಎ.ಆರ್.ರವಿಕುಮಾರ್, ಉಪಾಧ್ಯಕ್ಷ ಮುಕುಂದ, ಬ್ಯಾಂಕಿನ ನಿರ್ದೇಶಕರು ಭಾಗವಹಿಸಿದ್ದರು.